Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸಮಯ ಮೀರಿ ಯಕ್ಷಗಾನ ಪ್ರದರ್ಶನ ಆರೋಪ. ಪ್ರದರ್ಶನ ನಿಲ್ಲಿಸಿದ್ದಕ್ಕೆ ವ್ಯಾಪಕ ಟೀಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹೇರಿಕುದ್ರುವಿನ ಮಹಾಗಣಪತಿ ಮಾನಸ ಮಂದಿರದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡಲಾದ ಸಮಯ ಮೀರಿ ಮೈಕ್ ಬಳಕೆ ಮಾಡಲಾಗುತ್ತಿದೆ ಎಂಬ ದೂರು ಸ್ವೀಕಾರವಾದ ಹಿನ್ನೆಲೆಯಲ್ಲಿ ಪೊಲೀಸರು ತಡೆಯೊಡ್ಡಿದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಇದಕ್ಕೆ ಯಕ್ಷಗಾನ ಪ್ರೇಮಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನ.3ರಿಂದ ಆರಂಭವಾಗಿದ್ದು ನ.11ರ ತನಕ ಯಕ್ಷ ಹಬ್ಬ ಆಯೋಜಿಸಲಾಗಿತ್ತು. ನ.4ರಂದು ಗೆಜ್ಜೆನಾದ ಯಕ್ಷಗಾನ ಕಲಾ ಮಂಡಳಿ ಕುಂದಾಪುರ ಇವರಿಂದ ವಿಘ್ನೇಶಪ್ರಸಾದ ಗಂಗೊಳ್ಳಿ ನಿರ್ದೇಶನದಲ್ಲಿ ಶ್ರೀ ಕೃಷ್ಣ ಲೀಲಾಮೃತ ಪ್ರಸಂಗದ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ಪೊಲೀಸರು ಆಗಮಿಸಿ ದೂರು ಬಂದ ಹಿನ್ನೆಲೆಯಲ್ಲಿ ಪ್ರದರ್ಶನ ಸ್ಥಗಿತಗೊಳಿಸಲು ಸೂಚಿಸಿದ್ದಾಗಿ ಮೈಕ್ ಮೂಲಕ ಘೋಷಣೆ ಮಾಡಿ ಪ್ರದರ್ಶನ ರದ್ದು ಮಾಡಲಾಯಿತು.

ರಾತ್ರಿ 10.30ವರೆಗೆ ಅನುಮತಿ ಪಡೆದಿದ್ದೆವು. ಇದು ರಾಜಕೀಯ ಷಡ್ಯಂತ್ರ. 8-10 ವರ್ಷದ ಮಕ್ಕಳಿಗೆ ತರಬೇತಿ ನೀಡಿ ಪ್ರದರ್ಶನ ನಡೆಯುತ್ತಿತ್ತು. ಭಾಗವತಿಕೆ ಮಾಡಲು ಬಾಲಕನೇ ಇದ್ದು ಬೆಳಕಿನ ಪ್ರಖರತೆಗೆ ಭಾಗವತಿಕೆ ಅಸಾಧ್ಯವಾಗಿ ಅರ್ಧದಲ್ಲೇ ನಿಲ್ಲಿಸಿದ ಕಾರಣ ಬೇರೆ ಭಾಗವತರನ್ನು ಕರೆಯಿಸಿದ ಕಾರಣ ಯಕ್ಷಗಾನ ಮುಗಿಯುವುದು ವಿಳಂಬವಾಯಿತು. 2004ರಲ್ಲಿ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ ಯಕ್ಷೋತ್ಸವ ಸಮಿತಿ ಪ್ರಾರಂಭಿಸಿ ಪ್ರತೀ ವರ್ಷ ಸಪ್ತಾಹ ನಡೆಸಲಾಗುತ್ತಿದೆ. ಆದರೆ ಈಗ ರಾಜಕೀಯ ನುಸುಳಿದೆ. ನಮ್ಮ ಸಂಸ್ಥೆಯಿಂದಲೇ ಕಲಿತ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಗಮಿಸಿ ಯಕ್ಷಗಾನ ನಿಲ್ಲಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Exit mobile version