Kundapra.com ಕುಂದಾಪ್ರ ಡಾಟ್ ಕಾಂ

ಹೆರಿಗೆ ವೇಳೆ ಮಗು ಸಾವು, ವೈದ್ಯರ ನಿರ್ಲಕ್ಷ ಆರೋಪ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ಮುಂದೆ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹೆರಿಗೆ ವೇಳೆ ಮಗು ಮೃತಪಟ್ಟ ಘಟನೆಗೆ ಆಸ್ಪತ್ರೆಯ ಹೆರಿಗೆ ತಜ್ಞ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಮುಂದೆ ಕುಟುಂಬಿಕರು ಹಾಗೂ ಊರಿನವರು ಪ್ರತಿಭಟನೆ ನಡೆಸುತ್ತಿದ್ದಾರೆ.

ಗಂಗೊಳ್ಳಿಯ ಗುಡ್ಡದಕೇರಿಯ ಶ್ರೀನಿವಾಸ ಖಾರ್ವಿ ಎಂಬುವವರ ಪತ್ನಿ ಜ್ಯೋತಿ ಖಾರ್ವಿ ಹೆರಿಗಾಗಿ ನ.17ರಂದು ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ ಡಾ. ಚಂದ್ರ ಮೊಗವೀರ ಎಂಬುವವರು ಹೆರಿಗೆ ಮಾಡಿಸಿದ್ದು, ಈ ವೇಳೆ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದರು. ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡು ಸಾವು ಸಂಭವಿಸಿದೆ ಎಂದಿದ್ದರು. ಆಸ್ಪತ್ರೆಗೆ ದಾಖಲು ಮಾಡಿದಾಗ ಗರ್ಭಿಣಿಗೆ ರಕ್ತಸ್ರಾವ ಇದೆ, ಹೊಟ್ಟೆ ನೋವು ಇದೆ ಎಂದರೂ ವೈದ್ಯರು ಕೇಳಿರಲಿಲ್ಲ. ಎಂಟೂವರೆ ತಿಂಗಳಿನ ವೇಳೆ ಸ್ಕಾನಿಂಗ್ ಮಾಡದ ಕಾರಣ ಈಗ ಸ್ಕ್ಯಾನಿಂಗ್ ಮಾಡಿ ಎಂದು ಮನೆಯವರು ಒತ್ತಾಯಿಸಿದರೂ ವೈದ್ಯರು ಸ್ಕಾನಿಂಗ್ ಮಾಡಿಸಲಿಲ್ಲ. ಅಲ್ಲದೇ ಉಡಾಫೆಯಿಂದ ಮಾತಾಡಿದ್ದಾಗಿ ಕುಟುಂಬಿಕರು ಆರೋಪಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದ ಮಗುವಿನ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುಟುಂಬಿಕರು ಹಾಗೂ ಊರವರು ಸೋಮವಾರ ಸಂಜೆಯಿಂದ ಪ್ರತಿಭಟನೆ ನಡೆಸುತ್ತಿದ್ದು, ವೈದ್ಯರ ಅಮಾನತಿಗೆ ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಡಿಸಿ, ಜಿಲ್ಲಾ ಆರೋಗ್ಯಾಧಿಕಾರಿ ಬರಬೇಕು. ಘಟನೆಗೆ ಸಂಬಂಧಪಟ್ಟ ವೈದ್ಯರ ಅಮಾನತು ಮಾಡಿ, ಪ್ರಕರಣದ ಸಮಗ್ರ ತನಿಖೆ ನಡೆಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ವತ್ತಾಯಿಸಿದ್ದಾರೆ. ರಾತ್ರಿ 9 ರ ತನಕವೂ ಪ್ರತಿಭಟನೆ ಮುಂದುವರೆದಿದ್ದು ಡಿ.ಎಚ್.ಓ ಅವರು ಸ್ಥಳಕ್ಕಾಗಮಿಸಿ ಮನ ಒಲಿಸುವ ಕೆಲಸ ಮಾಡಿದ್ದಾರೆ. ಆದರೆ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿದ್ದಾರೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಈ ವೇಳೆ ಉಪಸ್ಥಿತರಿದ್ದರು.

Exit mobile version