Kundapra.com ಕುಂದಾಪ್ರ ಡಾಟ್ ಕಾಂ

ಕ್ರಿಕೆಟರ್ ಶ್ರೀಶಾಂತ್, ಉದ್ಯಮಿ ವೆಂಕಟೇಶ್ ಕಿಣಿ ಹೆಸರನ್ನು ವಿನಾಕಾರಣ ಎಳೆತಂದಿದ್ದಾರೆ – ರಾಜೀವ್ ಕುಮಾರ್ ಸ್ಪಷ್ಟನೆ

ಬೈಂದೂರು: ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ವಿಚಾರದಲ್ಲಿ ಉಂಟಾದ ಆರ್ಥಿಕ ಗೊಂದಲದಿಂದಾಗಿ ಸರೀಗ್ ಎಂಬುವವರು ಕಣ್ಣೂರು ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ಬಗ್ಗೆ ಓಂ ಭಾರತ್ ಇಂಡಿಯಾ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಓಂ ಭಾರತ್ ಇಂಡಿಯಾ ಎಂಬ ಸಂಸ್ಥೆಯಲ್ಲಿ ರಾಜೀವ್ ಕುಮಾರ್ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದು, ಸಾಜು ಎಂಬುವವರು ಪಾರ್ಟ್ನರ್ ಆಗಿದ್ದಾರೆ. ಸರೀಗ್ ಎಂಬುವವರು ದೂರಿನಲ್ಲಿ ತಿಳಿಸಿದಂತೆ ಕ್ರಿಕೆಟ್ ಅಕಾಡೆಮಿ ಹೆಸರಿನಲ್ಲಿ ಯಾವುದೇ ಹಣ ಸ್ವೀಕರಿಸಿಲ್ಲ. ಬದಲಾಗಿ ವಿಲ್ಲಾ ನಿರ್ಮಿಸಿಕೊಡುವ ಯೋಜನೆಗೆ ಓಂ ಭಾರತ್ ಇಂಡಿಯಾ ಸಂಸ್ಥೆಯಲ್ಲಿ ಸರೀಗ್ ಎಂಬ ವ್ಯಕ್ತಿ ಹಣ ಹೂಡಿಕೆ ಮಾಡಿದ್ದರು. ಈ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್ ರಾಜೀವ್ ಕುಮಾರ್ ಮತ್ತು ಸರೀಗ್ ಎಂಬ ವ್ಯಕ್ತಿಯ ನಡುವೆ ನಡೆದಿರುವ ವ್ಯವಹಾರದಲ್ಲಿ, ಉದ್ಯಮಿ ಕೆ. ವೆಂಕಟೇಶ್ ಕಿಣಿ ಹಾಗೂ ಕ್ರಿಕೆಟರ್ ಶ್ರೀಶಾಂತ್ ಅವರು ಇದ್ದಾರೆ ಎಂಬು ಬಿಂಬಿಸಿ ದೂರು ನೀಡಲಾಗಿದೆ. ಆದರೆ ಅವರಿಬ್ಬರೂ ಈ ವ್ಯವಹಾರದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಪಾಲುದಾರಿಕೆ ಅಥವಾ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಆಗಿದ್ದೇನು?
ಹಾಲ್ಕಲ್ನಲ್ಲಿ ಜಾಗವೊಂದನ್ನು ಲೀಸ್ ಪಡೆದಿದ್ದ ಓಂ ಭಾರತ್ ಇಂಡಿಯಾದ ಮ್ಯಾನೇಜಿಂಗ್ ಪಾರ್ಟ್ನರ್ ರಾಜೀವ್ ಕುಮಾರ್ ಅವರು ಅಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಾಡುವ ಯೋಜನೆ ಹೊಂದಿದ್ದರು. ಅದರಂತೆ 2019ರ ಎಪ್ರಿಲ್ ತಿಂಗಳಿನಲ್ಲಿ ರಾಜೀವ್ ಕುಮಾರ್, ವಿಲ್ಲಾ ನಿರ್ಮಿಸಲು ಬಂಡವಾಳವಾಗಿ 18.75 ಲಕ್ಷ ಹಣವನ್ನು ಸರೀಗ್ ಎಂಬ ವ್ಯಕ್ತಿಯಿಂದ ಪಡೆದುಕೊಂಡಿದ್ದರು. ಆದರೆ ಲಾಕ್ ಡೌನ್ ಕಾರಣವೊಡ್ಡಿ ಸರೀಗ್ ಅವರು 5 ಲಕ್ಷ ಹಣವನ್ನು ವಾಪಾಸ್ ಪಡೆದಿದ್ದರು. ಹೀಗೆ ಹಣ ಹಿಂಪಡೆದಿರುವುದು, ಲಾಕ್ ಡೌನ್ ಮೊದಲಾದ ಕಾರಣದಿಂದ ವಿಲ್ಲಾ ಯೋಜನೆ ಸ್ಥಗಿತಗೊಂಡಿತ್ತು. ಬಾಕಿ ಹಣವನ್ನು ಹಿಂದಿರುಗಿಸಲು ರಾಜೀವ್ ಕುಮಾರ್ ಅವರ ಸಮಯ ಕೇಳಿದ್ದರು. ರಾಜೀವ್ ಕುಮಾರ್ ಹಾಗೂ ಸರೀಗ್ ಅವರ ವ್ಯವಹಾರದಲ್ಲಿ ವಿಳಂಬ ಉಂಟಾಗಿ ಸರೀಗ್ ಅವರು ಕಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ವಿನಾಕಾರಣ ಈ ವ್ಯವಹಾರಕ್ಕೆ ಸಂಬಂಧವೇ ಇಲ್ಲದ ಉದ್ಯಮಿ ಕೆ. ವೆಂಕಟೇಶ್ ಕಿಣಿ ಹಾಗೂ ಕ್ರಿಕೆಟರ್ ಶ್ರೀಶಾಂತ್ ಅವರ ಹೆಸರನ್ನು ಎಳೆದು ತಂದಿದ್ದರು. ಇದೀಗ ಸರೀಗ್ ಅವರಿಗೆ ಒಟ್ಟು 25 ಲಕ್ಷ ಹಣ ಸಂದಾಯ ಮಾಡಲಾಗಿದ್ದು, ಕಣ್ಣೂರು ಠಾಣೆಯಲ್ಲಿ ನೀಡಲಾಗಿದ್ದ ದೂರನ್ನು ಹಿಂಪಡೆದಿದ್ದಾರೆ.

ವಿಷಾದ:
ನಮ್ಮ ಸಂಸ್ಥೆ ಹಾಗೂ ಸರೀಗ್ ಎಂಬುವವರ ನಡುವೆ ಮಾತ್ರವೇ ನಡೆದಿರುವ ವ್ಯವಹಾರದಲ್ಲಿ ಅನಗತ್ಯವಾಗಿ ಸಮಾಜದಲ್ಲಿ ಗಣ್ಯ ಸ್ಥಾನವನ್ನು ಹೊಂದಿರುವ ಕ್ರಿಕೆಟರ್ ಶ್ರೀಶಾಂತ್ ಹಾಗೂ ಉದ್ಯಮಿ ಕೆ. ವೆಂಕಟೇಶ ಕಿಣಿ ಅವರ ಹೆಸರನ್ನು ಎಳೆದು ತಂದಿದ್ದಾರೆ. ಓಂ ಭಾರತ್ ಇಂಡಿಯಾ ಸಂಸ್ಥೆಯಲ್ಲಿ ಹಾಗೂ ಈ ವ್ಯವಹಾರದಲ್ಲಿ ಯಾವುದೇ ಪಾತ್ರ ಹೊಂದಿಲ್ಲದಿದ್ದರೂ ಅವರ ಹೆಸರನ್ನು ದೂರಿನಲ್ಲಿ ಸೇರಿಸಿರುವ ಬಗ್ಗೆ ವಿಷಾದವಿದೆ. ಈ ಬಗ್ಗೆ ಇಬ್ಬರೂ ಗಣ್ಯರಲ್ಲಿ ಕ್ಷಮೆ ಯಾಚಿಸುವುದಾಗಿ ರಾಜೀವ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೂರು ನೀಡಿದ ಸರೀಗ್ ಅವರಿಗೆ ನೀಡಬೇಕಿದ್ದ ಹಣ ಕೂಡ ಸಂದಾಯವಾಗಿದೆ. ಈ ಕುರಿತು ಅವರು ಮಾದ್ಯಮ ಹೇಳಿಕೆ ನೀಡಲಿದ್ದಾರೆ. ಕೆಲವು ವ್ಯಕ್ತಿಗಳು ಅನಗತ್ಯ ಅಪಪ್ರಚಾರ ಮಾಡುತ್ತಿದ್ದು ಈ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಯಾವುದೇ ರೀತಿಯ ವಂಚನೆಯಾಗಿಲ್ಲ. ಕಾನೂನು ರೀತಿಯಲ್ಲಿ ಇತ್ಯರ್ಥಗೊಂಡಿದೆ ಎಂದು ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Exit mobile version