ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವ ನ.23ರಿಂದ 30ರ ತನಕ ನಡೆಯಲಿದೆ. ನ.28ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವೈಭವದ ಮನ್ಮಹಾರಥೋತ್ಸವ ನೆರವೇರಲಿದೆ.
ಉತ್ಸವದ ಮೊದಲನೇ ದಿನ ಸಾಂಪ್ರದಾಯಿಕ ವಿಧಿ-ವಿಧಾನದ ಮೂಲಕ ಧ್ವಜಮರವನ್ನು ತಂದು ನೆಡುವುದರ ಮೂಲಕ ಅಂಕುರಾರ್ಪಣೆಯೊಂದಿಗೆ ಆರಂಭಗೊಂಡಿತು. ಎರಡನೇ ದಿನ ಗಜಾರೋಹಣ ಉತ್ಸವ, ಯಾಗಶಾಲೆಯಲ್ಲಿ ಪುಣ್ಯಾಹ ಜಾತ್ರೋತ್ಸವ ವೈಭವ ಹೋಮ, ರಾತ್ರಿ ಸಲಾಂ ಮಂಗಳಾರತಿ ದಿನ ಗಜಾರೋಹಣ, ಅಶ್ವಾರೋಹಣ ನಡೆಯುತ್ತದೆ. ಮೂರನೆಯ ದಿನ ಅಶ್ವಾರೋಹಣ, ಓಲಗ ಮಂಟಪದಲ್ಲಿ ಪೂಜೆ ನಗರೋತ್ಸವ ನಡೆಯುತ್ತದೆ. ನಾಲ್ಕನೆಯ ದಿನ ಮಯೂರ ವಾಹನ ಉತ್ಸವ, ರಾತ್ರಿ ರಂಗಪೂಜೆ ನಡೆಯುತ್ತದೆ. ಐದನೆಯ ದಿನ ಪುಷ್ಪಕ ಸಿಂಹಾರೋಹಣ ಉತ್ಸವ, ರಂಗಪೂಜೆ ಜರುಗುತ್ತದೆ. ಈ ದಿವಸ ಅಮ್ಮನವರು ಮೂಲಸ್ಥಾನವಾದ ಸಮುದ್ರ ದಂಡೆಯ ದೇವಿಕೆರೆ ತೊಪ್ಪಲು ಕಟ್ಟೆಗೆ ತೆರಳುತ್ತಾರೆ. ಆರನೆಯ ದಿನ ಮನ್ಮಹಾರಥೋತ್ಸವ, ಏಳನೆಯ ದಿನ ಓಕುಳಿ ಮತ್ತು ಚೂರ್ಣೋತ್ಸವ ನಡೆಯುತ್ತದೆ. ಎಂಟನೇ ದಿನ ಧ್ವಜಾವರೋಹಣ, ಅಂಕುರ ಪ್ರಸಾದ ವಿನಿಯೋಗ ರಾತ್ರಿ ನಗರೋತ್ಸವ ನಡೆಯುತ್ತದೆ.
ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.