Kundapra.com ಕುಂದಾಪ್ರ ಡಾಟ್ ಕಾಂ

ಕೊಡಿ ಹಬ್ಬ: ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ:
ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ತಂತ್ರಿಗಳು ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳನ್ನು ನೆರವೇರಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ಸಂಜೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ.

ದೇವಳದ ರಥೋತ್ಸವದ ಸಂದರ್ಭ ಗರುಡ ದರ್ಶನ ಆಗುವುದು ವಾಡಿಕೆ. ರಥೋತ್ಸವಕ್ಕೆ ಚಾಲನೆ ಸಿಗುತ್ತಿರುವಂತೆಯೇ ಗರುಡ ದರ್ಶನ ಆಗಿದ್ದು ರಥಕ್ಕೆ ಎರಡು ಸುತ್ತು ಬಂದು ನಿರ್ಗಮಿಸುತ್ತದೆ. ಗರುಡದರ್ಶನ ವೀಕ್ಷಿಸಲು ಸಹಸ್ರಾರು ಭಕ್ತರು ನೆರೆದಿದ್ದು ಗರುಡ ರಥಕ್ಕೆ ಸುತ್ತು ಹೊಡೆಯುತ್ತಿರುವಂತೆಯೇ ರೋಮಾಂಚನಗೊಂಡರು.

ನವ ವಧುವರರು ವಾಡಿಕೆಯಂತೆ ಹಬ್ಬಕ್ಕೆ ಬಂದು ಕೊಡಿ (ಕಬ್ಬು) ಕೊಂಡು ದೇವರಿಗೆ ಪೂಜೆ ಸಲ್ಲಿಸಿದರು. . ನವದಂಪತಿ ಕೊಡಿ ಹಬ್ಬದ ದಿನದಂದು ದೇವರ ದರ್ಶನ ಮಾಡಿ ಕಬ್ಬಿನ ಕೊಡಿ (ಜಲ್ಲೆ) ಕೊಂಡೊಯ್ದರೆ ಅವರ ಬಾಳಿನಲ್ಲಿ ಕೊಡಿ ಅರಳುತ್ತದೆ ಎನ್ನುವ ನಂಬಿಕೆ ಇದೆ.

ವಿವಿಧ ಹರಕೆ ಕಟ್ಟಿಕೊಂಡವರು ಸುತ್ತಕ್ಕಿ ಸೇವೆ ನೀಡುವುದು ವಾಡಿಕೆಯಾಗಿದ್ದು, ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಸುಮಾರು ನಾಲ್ಕು ಎಕ್ರೆ ವಿಸ್ತೀರ್ಣದ ‘ಕೋಟಿ ತೀರ್ಥ’ ಪುಷ್ಕರಣಿಯ ಸುತ್ತ ಅಪೇಕ್ಷಿತರು ಬಿಳಿಯ ಬಟ್ಟೆಯನ್ನು ಹಾಕಿ ಕುಳಿತುಕೊಳ್ಳುತ್ತಾರೆ. ಭಕ್ತಾಧಿಗಳು ಪುಷ್ಕರಣಿಯಲ್ಲಿ ಮುಳುಗೆದ್ದು ಬಿಳಿ ಬಟ್ಟೆಹಾಸಿನ ಮೇಲೆ ಅಕ್ಕಿಯನ್ನು ಚೆಲ್ಲಿ ಹರಕೆ ಸಲ್ಲಿಸುತ್ತಾರೆ.

ಕೊಡಿಹಬ್ಬದ ಅಂಗವಾಗಿ ನಗರದ ಬೀದಿಗಳು ಸಿಂಗಾರಗೊಂಡಿದ್ದು ದೇವಸ್ಥಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿತ್ಯವೂ ಜರುಗುತ್ತಿದೆ. ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ಸಲುವಾಗಿ ಕುಂದಾಪುರ ಡಿ.ಎಸ್ಪಿ ನೇತೃತ್ವದಲ್ಲಿ ರಥೋತ್ಸವದಂದು ಬಿಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು.

ನಾಳೆ ರಾತ್ರಿ ಚೂರ್ಣೋತ್ಸವ, ಮಧ್ಯರಾತ್ರಿ ಓಕುಳಿಯಾಟ ಹಾಗೂ ಅವಭೃತ ಸ್ನಾನ ನಡೆಯುತ್ತದೆ.

Exit mobile version