Kundapra.com ಕುಂದಾಪ್ರ ಡಾಟ್ ಕಾಂ

ಬಿಎಸ್ಎನ್ಎಲ್ ಟವರ್ ಬ್ಯಾಟರಿ ಕಳವು ಪ್ರಕರಣ: ಮೂವರನ್ನು ಬಂಧಿಸಿದ ಶಂಕರನಾರಾಯಣ ಪೊಲೀಸರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ಶಂಕರನಾರಾಯಣದ ಗೋಳಿಕಟ್ಟೆ ಗುಡ್ಡೆಯ ಮೇಲಿನ ಬಿ.ಎಸ್.ಎನ್.ಎಲ್ ಮೈಕ್ರೋ ಟವರ್ ಕಟ್ಟಡದ ಒಳಗೆ ಅಳವಡಿಸಿದ ಎಕ್ಸಿಡ್ 1000 ಎ.ಎಚ್ ಬ್ಯಾಟರಿಗಳಲ್ಲಿ 6 ಬ್ಯಾಟರಿಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಉದ್ಯಾವರ ಪಿತ್ರೋಡಿ ಸಮೀಪದ ನಿವಾಸಿ ಕೃಷ್ಣ (45), ಬಂಟ್ವಾಳ ಫರಂಗಿಪೇಟೆಯ ಬದ್ರುರುದ್ದೀನ್ (38) ಹಾಗೂ ಲಕ್ಷ್ಮೀನಗರ ನಿವಾಸಿ ಉಸ್ಮಾನ್ (38) ಎಂಬಾತನನ್ನು ಬಂಧಿಸಲಾಗಿದೆ.

ನವೆಂಬರ್ 27ರಂದು ಕಳ್ಳರು ಬಿ.ಎಸ್.ಎನ್.ಎಲ್ ಟವರ್ ಕಟ್ಟಡದೊಳಕ್ಕೆ ಪ್ರವೇಶಿಸಿ ಒಳಗೆ ಇರಿಸಿದ್ದ ಬ್ಯಾಟರಿಗಳನ್ನು ಕಳವುಗೈದಿದ್ದರು. ಕೃತ್ಯಕ್ಕೆ ಕೂಲಿಯಾಳುಗಳನ್ನು ಬಳಸಿಕೊಂಡಿದ್ದರು. ಕಳವಿನ ಮಾಹಿತಿ ತಿಳಿದ ಬಿ.ಎಸ್.ಎನ್.ಎಲ್ ತಾತ್ಕಾಲಿಕ ಸಿಬ್ಬಂದಿ, ಆಜ್ರಿಯ ಪ್ರದೀಪ್ ಪೂಜಾರಿ ಎಂಬುವವರು ಆರೋಪಿಗಳನ್ನು ಹಿಡಿಯಲ್ಲಿ ಯತ್ನಿಸಿದ್ದು, ಅಷ್ಟರಲ್ಲಿ ಮೂವರು ಪರಾರಿಯಾಗಿದ್ದರು. ಬಳಿಕ ಅವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ನ.28 ರಂದು ಶಂಕರನಾರಾಯಣ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಬ್ಯಾಟರಿ ಹಾಗೂ ಕಳ್ಳತನಕ್ಕೆ ಬಳಸಿದ ಪಿಕಪ್ ವಾಹನವನ್ನು ಹಾಗೂ ಪರಾರಿಯಾಗಿದ್ದ ಆರೋಪಿಗಳನ್ನು ಉಡುಪಿ ಸಮೀಪ ಬಂಧಿಸಿದ್ದು ಸುಮಾರು 4,60,000 ರೂಪಾಯಿ ಮೌಲ್ಯದ ಸೊತ್ತು ಮತ್ತು ವಾಹನವನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಕುಂದಾಪುರ ಪೊಲೀಸ್ ವೃತ್ತದ ಸಿಪಿಐ ಜಯರಾಮ ಡಿ. ಗೌಡ ನಿರ್ದೇಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಶಂಕರನಾರಾಯಣ ಠಾಣೆ ಪಿಎಸ್ಐ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Exit mobile version