Kundapra.com ಕುಂದಾಪ್ರ ಡಾಟ್ ಕಾಂ

ಕಾರ್ಟೂನು ಹಬ್ಬಕ್ಕೆ ದಶಮ ಸಂಭ್ರಮ! ಡಿ.09ರಿಂದ 12ರ ತನಕ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೇಖೆಗಳ ಮೂಲಕ ಚಾಟಿ – ನಗುವಿನ ಚಟಾಕಿಯ ಜೊತೆಗೆ ವಾಸ್ತವದ ಅನಾವರಣಗೊಳಿಸುವ ಕಾರ್ಟೂನು ಕ್ರೀಯಾಶಿಲ ಕಲಾಮಾಧ್ಯಮ. ಇಂತಹ ಕಾರ್ಟೂನು ರಚಿಸುವ ಕಾರ್ಟೂನಿಷ್ಠರನ್ನು, ಕಾರ್ಟೂನಿಷ್ಠರ ತವರು ಕುಂದಾಪುರದಲ್ಲಿ ಒಗ್ಗೂಡಿಸಿ ಆಯೋಜಿಸಲಾಗುತ್ತಿರುವ ಕಾರ್ಟೂನು ಹಬ್ಬಕ್ಕೆ ದಶಮ ಸಂಭ್ರಮ.

ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ್ಯರ ಅವರ ಸಾರಥ್ಯದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ತಂಡದ ಕಾರ್ಟೂನಿಷ್ಠರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಟೂನು ಹಬ್ಬ ಹತ್ತಾರು ವಿಶೇಷತೆಗಳೊಂದಿಗೆ ನಡೆಯುತ್ತಿದ್ದು ಈ ಭಾರಿಯೂ ಡಿಸೆಂಬರ್ 9 ರಿಂದ 12ರ ತನಕ ನಾಲ್ಕು ದಿನಗಳ ಕಾಲ ಕುಂದಾಪುರದ ಕಲಾಮಂದಿರದಲ್ಲಿ ಜರುಗಲಿದೆ.

ಹಬ್ಬದಲ್ಲಿ ಕಾರ್ಟೂನು ಪ್ರದರ್ಶನ, ವಿದ್ಯಾರ್ಥಿ ಹಾಗೂ ಪೋಷಕರ ಕಾರ್ಟೂನು ಸ್ವರ್ಧೆ, ಲೈವ್ ಕ್ಯಾರಿಕೇಚರಿಂಗ್, ಮಾಸ್ಟರ್ ಸ್ಟ್ರೋಕ್, ನಿತ್ಕ ಕಾಮಿಡಿ ಕೂತ್ಕ ನಗಾಡಿ, ಸೆಲ್ಫಿ ಕಾರ್ನರ್, ಹೀಗೆ ನಾಲ್ಕು ದಿನವೂ ಕಾರ್ಟೂನು ಪ್ರಿಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ರಂಜನೆ ಹಾಗೂ ಅರಿವಿಗಾಗಿ ಇದರ ಜೊತೆ ಜೊತೆಗೆ ಕಾರ್ಟೂನಿನ ಬಗೆಗೆ ಒಲವು ಮೂಡಿಸುವುದಕ್ಕಾಗಿ ಕಾರ್ಟೂನು ಕುಂದಾಪ್ರ ತಂಡ ಸಿದ್ದವಾಗಿದೆ.

ಡಿ.9ರಂದು ಕಾರ್ಟೂನು ಹಬ್ಬ ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಾಹಿತಿ, ಕವಿ, ವ್ಯಂಗ್ಯಚಿತ್ರಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕುಂ. ವೀರಭದ್ರಪ್ಪ ನೆರವೇರಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಕರ್ನಾಟಕ ರಾಜ್ಯ ಹಿಂದುಳಿ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆಯವರು ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಹೋರಾಟಗಾರರು, ರಾಜ್ಯ ಡಿವೈಎಫ್ಐ ಘಟಕದ ಅಧ್ಯಕ್ಷರು ಆದ ಮುನೀರ್ ಕಾಟಿಪಳ್ಳ, ಜನಪರ ಲೇಖಕರು ಹಾಗೂ ಖ್ಯಾತ ಪತ್ರಕರ್ತರಾದ ನವೀನ್ ಸೂರಿಂಜೆ, ನ್ಯೂಸ್ ಮಿನಿಟ್ನ ಪತ್ರಕರ್ತರಾದ ಪ್ರಜ್ವಲ್ ಭಟ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಇತ್ತೀಚೆಗೆ ಮೃತರಾದ ಪತ್ರಕರ್ತ, ಸಾಹಿತಿ ಡಾ. ಶೇಖರ್ ಅಜೆಕಾರ್ ಇವರ ಸ್ಮರಣಾರ್ಥ ‘ನುಡಿನಮನ’ ಮತ್ತು ಮೃತರ ಮಕ್ಕಳ ವಿಧ್ಯಾಭ್ಯಾಸದ ನೆರವಿಗಾಗಿ ಹಣ ಸಂಗ್ರಹಣೆಯ ಭಾಗವಾಗಿ ದಾನಿಗಳ ಕ್ಯಾರಿಕೇಚರ್ ರಚಿಸುವ ಭಾಗವಾಗಿ ‘ಚಿತ್ರನಿಧಿ’ ಉದ್ಘಾಟನೆಗೊಳ್ಳಲಿದೆ. ಇದರ ಉದ್ಘಾಟನೆಯನ್ನು ಉದ್ಯಮಿ ಶಶಿಧರ ಚೌಟ ನೆರವೇರಿಸಲಿದ್ದಾರೆ. ನುಡಿನಮನ ಕಾರ್ಯಕ್ರಮದಲ್ಲಿ ಕುಂದಾಪುರದ ಹಿರಿಯ, ಖ್ಯಾತ ಪತ್ರಕರ್ತರಾದ ಯು.ಎಸ್ ಶೆಣೈ, ವಾರ್ತಾಭಾರತಿ ಪತ್ರಿಕೆಯ ಬಿ.ಎಂ ಬಶೀರ್, ಕ್ರೀಡಾ ಪತ್ರಕರ್ತ ಸೋಮಶೇಖರ ಪಡುಕೆರೆ, ಕುಂದಾಪ್ರ ಡಾಟ್ ಕಾಂನ ಸುನಿಲ್ ಬೈಂದೂರು ಭಾಗವಹಿಸಲಿದ್ದಾರೆ.

ಡಿಸೆಂಬರ್ 9ರಂದು ಮಧ್ಯಾಹ್ನ 2ಗಂಟೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ “ಕಾರ್ಟೂನು ರಚನಾ ಸ್ಪರ್ಧೆ”ಯು ನಡೆಯಲಿದೆ.

ಕುಂದೇಶ್ವರ ದೀಪ ಹಾಗೂ ಕಾರ್ಟೂನು ಹಬ್ಬಕ್ಕೆ ಶುಭಕೋರಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಗು ಉಜ್ವಲ್ ನಿಟ್ಟೆ ರಚಿಸಿದ ಮರಳು ಶಿಲ್ಪ

ಡಿಸೆಂಬರ್ 10ರಂದು ಬೆಳಿಗ್ಗೆ 10.30ಕ್ಕೆ ‘ಖ್ಯಾತ ವ್ಯಂಗ್ಯಚಿತ್ರಕಾರರಿಂದ ಲೈವ್ ಎಡಿಟೋರಿಯಲ್ ಕಾರ್ಟೂನು ರಚನೆ ಹಾಗೂ ಸಂವಾದ’ದ ಅಂಗವಾಗಿ ಮಾಸ್ಟರ್ ಸ್ಟ್ರೋಕ್ಸ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸೌತ್ ಪಸ್ಟ್ನ ಕಾರ್ಯಕಾರಣಿ ಸಂಪಾದಕಿ ಅನುಷಾ ರವಿ ಸೂದ್ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಬ್ಯುಸಿನೆಸ್ ಇಂಡಿಯಾದ ಹಿರಿಯ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಹಾಗೂ ವೃತ್ತಿಪರ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಉಪಸ್ಥಿತರಿರಲಿದ್ದಾರೆ. ಆ ಸಂಧರ್ಭದಲ್ಲಿ ಆನ್ಲೈನ್ ಮೂಲಕ ಟೈಮ್ಸ್ ಆಫ್ ಇಂಡಿಯಾದ ವ್ಯಂಗ್ಯಚಿತ್ರಕಾರ ಸಂದೀಪ್ ಅದ್ವರ್ಯು, ಡೆಕ್ಕನ್ ಹೆರಾಲ್ಡ್ನ ವ್ಯಂಗ್ಯಚಿತ್ರಕಾರ ಸಾಜಿತ್ ಕುಮಾರ್, ದೈನಿಕ್ ಭಾಸ್ಕರ್ ನ ವ್ಯಂಗ್ಯಚಿತ್ರಕಾರ ಇಸ್ಮಾಯಿಲ್ ಲಹರಿ ಜೊತೆಗೂಡಲಿದ್ದಾರೆ. ಹಿರಿಯ ವ್ಯಂಗ್ಯಚಿತ್ರಕಾರುಗಳಾದ ಗುಜ್ಜಾರಪ್ಪ, ನಂಜುಡಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಸಂಜೆ 5 ಗಂಟೆಗೆ ಕಾರ್ಟೂನು ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಆದರಣೀಯ ಅತಿಥಿಗಳಾಗಿ ಉಡುಪಿಯ ಖ್ಯಾತ ಮನೋವೈಧ್ಯರಾದ ಪಿ.ವಿ ಭಂಡಾರಿ, ಕುಂದಾಪುರ ತಾಲೂಕು ವೈಧ್ಯಾದಿಕಾರಿಗಳಾದ ಕೆ. ಪ್ರೇಮಾನಂದ, ಕುಂದಾಪುರ ಕಲಾಕ್ಷೇತ್ರದ ರೂವಾರಿ ಕಿಶೋರ್ ಕುಮಾರ್, ಕದಿಕೆ ಟ್ರಸ್ಟ್ನ ಸ್ಥಾಪಕರಾದ ಶ್ರೀಮತಿ ಮಮತಾ ರೈ ಭಾಗವಹಿಸಲಿದ್ದಾರೆ. ಈ ಸಂಧರ್ಭದಲ್ಲಿ ಶಿಕ್ಷಣ ತಜ್ಞ, ಚಿತ್ರ ಕಲಾವಿದ, ಹಿರಿಯ ಶಿಕ್ಷಕ ಉದಯ ಗಾಂವಕರ್, ಸಾಂಸ್ಕೃತಿಕ ಸಂಘಟನೆಯಾದ ಕಲಾಕ್ಷೇತ್ರ ಕುಂದಾಪುರ, ಹುಲಿವೇಶದ ಖ್ಯಾತ ಕಲಾವಿದ ಲಕ್ಷ್ಮಣ ಇವರುಗಳಿಗೆ ಸನ್ಮಾನ ನಡೆಯಲಿದೆ.

ಸತತ ನಾಲ್ಕು ದಿನಗಳ ಕಾಲ ಕುಂದಾಪುರದ ವ್ಯಂಗ್ಯಚಿತ್ರಕಾರರುಗಳಾದ ಪಂಜು ಗಂಗೊಳ್ಳಿ, ಸತೀಶ್ ಆಚಾರ್ಯ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ, ಸಂತೋಷ್ ಸಸಿಹಿತ್ಲು, ಚಂದ್ರ ಗಂಗೊಳ್ಳಿ, ಜಯರಾಂ ಉಡುಪ, ಜಿ.ಬಿ ಕಲೈಕಾರ್, ರವಿರಾಜ ಹಾಲಂಬಿ ಮುಂತಾದವರ ಆಯ್ದ, ಪ್ರಕಟಿತ ವ್ಯಂಗ್ಯಚಿತ್ರಗಳ ಪ್ರದರ್ಶನ ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರಿಂದ ಸ್ಥಳದಲ್ಲೇ ವ್ಯಂಗ್ಯಭಾವಚಿತ್ರ ರಚನೆ ನಡೆಯಲಿದೆ.

ಡಿಸೆಂಬರ್ 11 ಮತ್ತು 12ರಂದು ಕುಂದಾಪುರದ ಪರಿಸರದ ವಿವಿಧ ಶಾಲೆಗಳ ಆಯ್ದ ಕಾರ್ಟೂನಾಸಕ್ತ ವಿಧ್ಯಾರ್ಥಿಗಳಿಗೆ ಖ್ಯಾತ ವ್ಯಂಗ್ಯಚಿತ್ರಕಾರರಿಂದ ವ್ಯಂಗ್ಯಚಿತ್ರ ರಚನಾ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಸತೀಶ್ ಆಚಾರ್ಯರರ ಕನಸು:
ಕಲೆಯೊಂದಿಗಿನ ಒಡನಾಟ ಹವ್ಯಾಸವಾಗಿ, ಹವ್ಯಾಸ ವೃತ್ತಿಗೆ ತಿರುಗಿ, ವೃತ್ತಿ ಮೂಲಕ ವಿಶ್ವಖ್ಯಾತಿ ಗಳಿಸಿದ ಅಪ್ಪಟ ಕುಂದಾಪುರದ ಪ್ರತಿಭೆ ಸತೀಶ್ ಆಚಾರ್ಯ ಅವರು, ಇಂದು ತಾನು ಕಲಿತದ್ದನ್ನು ಜಗತ್ತಿಗೆ ಪಸರಿಸುವ ಹಾಗೂ ಮುಂದಿನ ಪೀಳಿಗೆಗೂ ಕಾರ್ಟೂನು ಕಲೆಯ ಕಸುವು ಒದಗಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ದೇಶದ ಪ್ರಮುಖ ಪತ್ರಿಕೆ ಹಾಗೂ ಪೋರ್ಟೆಲ್’ಗಳಲ್ಲಿ ಅವರ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿರುವುದಲ್ಲದೇ, ವಿಶ್ವದಾದ್ಯಂತ ಅವರ ಕಾರ್ಟೂನುಗಳಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಮುಂಬೈನಲ್ಲಿ ಬದುಕಿನ ರೇಸ್ ಆರಂಭಿಸಿದ್ದರು. ಒಂದು ಹಂತದ ಯಶಸನ್ನು ತಲುಪಿದ ಬಳಿಕ ತನ್ನ ಹುಟ್ಟೂರಿಗೆ ಮರಳಿ ರೇಸ್ ಮುಂದುವರಿಸಿದ ಸತೀಶ್ ಅವರು, ತಾನು ಸಾಗುವ ಮಾರ್ಗದಲ್ಲಿ ತನ್ನವರನ್ನೂ ಕರೆದೊಯ್ಯುತ್ತಿದ್ದಾರೆ. ಕಾರ್ಟೂನಿಷ್ಠರನ್ನು ಒಟ್ಟಾಗಿಸಿ ಸತತವಾಗಿ ಕಾರ್ಟೂನು ಹಬ್ಬ ಆಯೋಜಿಸಿ ಕುಂದಾಪುರ ಮಣ್ಣಿನಲ್ಲಿ ವ್ಯಂಗ್ಯಚಿತ್ರದ ಅಭಿರುಚಿಯನ್ನು ಹಾಗೆಯೇ ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ಕನಸುಗಳನ್ನು ಸಕಾರಗೊಳಿಸುವಲ್ಲಿ ಯಶವನ್ನೂ ಕಂಡಿದ್ದಾರೆ.

Exit mobile version