ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿರಿಯ ರಂಗಭೂಮಿ ಕಲಾವಿದ, ರೂಪಕಲಾ ಕುಂದಾಪುರ ಸಂಸ್ಥೆಯ ಮೂರುಮುತ್ತು ಖ್ಯಾತಿಯ ನಟ ಅಶೋಕ್ ಶ್ಯಾನುಭಾಗ್ (54ವರ್ಷ) ಅಲ್ಪಕಾಲದ ಅಸೌಖ್ಯದಿಂದಾಗಿ ನಿಧನರಾಗಿದ್ದಾರೆ.
ಕುಂದಾಪುರದ ಪಟ್ಟಣ್ ಶೇಟ್, ಹುಲಿಮನೆ ದಿ. ನಾರಾಯಣ ಶ್ಯಾನುಭೋಗ್ ಹಾಗೂ ದಿ. ಕಸ್ತೂರಿ ಶ್ಯಾನುಭಾಗ್ ಅವರ ಪುತ್ರ ಅಶೋಕ್ ಶ್ಯಾನುಭೋಗ್ ಅವರು 1979ರಲ್ಲಿ ರೂಪಕಲಾ ಸಂಸ್ಥೆಯಲ್ಲಿ ಬಾಲ ಕಲಾವಿದರಾಗಿ ಸತ್ಯ ಹರಿಶ್ಚಂದ್ರ, ಟಿಪ್ಪು ಸುಲ್ತಾನ್ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದವರು. ಓದಿನ ಬಳಿಕ ನಿರಂತರವಾಗಿ ರಂಗಭೂಮಿ, ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು.

ಸ್ವ ಉದ್ಯೋಗ ಮಾಡಿಕೊಂಡಿದ್ದ ಅಶೋಕ್ ಅವರು ನಾಟಕವನ್ನೇ ಬದುಕಿನ ಭಾಗವಾಗಿಸಿಕೊಂಡಿದ್ದರು. ರೂಪಕಲಾ ಸಂಸ್ಥೆಯ ದಿ. ಬಾಲಕೃಷ್ಣ ಪೈ (ಕುಳ್ಳಪ್ಪು) ಅವರ ನೆಚ್ಚಿನ ಶಿಷ್ಯರಾಗಿದ್ದ ಅವರು ಕುಳ್ಳಪ್ಪು ಅವರ 53 ನಾಟಕಗಳಲ್ಲಿ ಹಾಗೂ ಸತೀಶ್ ಪೈ ಅವರ 11 ನಾಟಕ ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೂಪಕಲಾ ಸಂಸ್ಥೆಯ ನಾಟಕಗಳು ಕನ್ನಡ ಮತ್ತು ಕೊಂಕಣಿಯಲ್ಲಿ ಏಳು ಸಾವಿರಕ್ಕೂ ಮಿಕ್ಕಿ ಪ್ರದಶ೯ನ ಕಂಡಿದ್ದವು.
ಮೃತರು ಪತ್ನಿ ಉಪನ್ಯಾಸಕಿ ಸುಮತಿ ಶೆಣೈ ಹಾಗೂ ಮಗಳು ಸಂಯುಕ್ತ ಶ್ಯಾನುಭಾಗ್ ಮತ್ತು ಅಪಾರ ಅಭಿಮಾನಿವರ್ಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ರೂಪಕಲಾ ಸಂಸ್ಥೆಯ ಸತೀಶ್ ಪೈ ಹಾಗೂ ಸಂತೋಷ್ ಪೈ ಸಂತಾಪ ಸೂಚಿಸಿದ್ದಾರೆ.
ಸದಾ ಪರರ ಹಿತವನ್ನೇ ಬಯಸುತ್ತಿದ್ದ ಆತ್ಮೀಯ ಸ್ನೇಹಿತನ ಅಗಲುವಿಕೆಯಿಂದ ನಿಜಕ್ಕೂ ಆಘಾತವಾಗಿದೆ. ಆರಂಭದ ದಿನಗಳಲ್ಲಿ ನಾಟಕ ಹವ್ಯಾಸವಾಗಿತ್ತು. ಮುಂದೆ ನಮ್ಮ ಮೂವರಿಗೂ ಬದುಕಿನ ಭಾಗವಾಯಿತು. ಅಶೋಕ್ ಅವರು ಖಾಸಗಿ ಸಂಸ್ಥೆಯಲ್ಲಿ ವೃತ್ತಿಯನ್ನು ತ್ಯಜಿಸಿ ನಾಟಕ ರಂಗದಲ್ಲಿಯೂ ತೊಡಗಿಸಿಕೊಂಡಿದ್ದರು. ಒಂದು ವಾರದ ಹಿಂದೆ ಅವರಿಗೆ ಅನಾರೋಗ್ಯ ಕಾಡಿತ್ತು. ಗುಣಮುಖರಾಗಿ ಬರುತ್ತಾರೆ ಎಂದು ಭಾವಿಸಿದ್ದೆವು. ಚಿಕ್ಕ ವಯಸ್ಸಿಗೆ ನಮ್ಮನ್ನು ಅಗಲಿರುವ ಬಗ್ಗೆ ಬೇಸರವಿದೆ – ಸತೀಶ್ ಪೈ, ರೂಪಕಲಾ ಕುಂದಾಪುರ