Kundapra.com ಕುಂದಾಪ್ರ ಡಾಟ್ ಕಾಂ

ಅಂಬೇಡ್ಕರರ ಸಂವಿಧಾನವೇ ರಾಷ್ಟ್ರೀಯತೆ – ಸಮುದಾಯದ 8ನೇ ಸಮ್ಮೇಳನದಲ್ಲಿ ಡಾ. ಬಿಳಿಮಲೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ರಾಷ್ಟ್ರೀಯತೆ. ಸಂವಿಧಾನದ ಆಧಾರದ ಮೇಲೆ ನಾವು ನಮ್ಮ ರಾಷ್ಟ್ರೀಯತೆಯನ್ನು ಕಟ್ಟಬೇಕು. ಆದರೆ ಇಂದು ರಾಷ್ಟ್ರೀಯತೆ ವಿಕೃತಗೊಂಡಿದೆ. ಧರ್ಮ ತನ್ನ ಮೌಲ್ಯ ಕಳೆದುಕೊಂಡಿದೆ. ಶಿಕ್ಷಣವು ಸಹಿಷ್ಣುತೆ, ಸೌಹಾರ್ದತೆಯನ್ನು ಕಲಿಸುತ್ತದೆ ಎನ್ನುವುದಕ್ಕೆ ನಮ್ಮಲ್ಲಿ ಆಧಾರವೇ ಇಲ್ಲ. ಹೀಗಾಗಿ ಸಾಂಸ್ಕೃತಿಕ ಪತನ ಅತ್ಯಂತ ವೇಗವಾಗಿ ನಡೆಯುತ್ತಿದೆ. ಹೋರಾಟದ ಹಿನ್ನೆಲೆಯಿರುವ ನಾವೆಲ್ಲ ಜವಾಬ್ದಾರಿಗಳನ್ನು ಈ ಬಗ್ಗೆ ಅರಿವಿರುವ ಹೊಸ ತಲೆಮಾರಿಗೆ ದಾಟಿಸುವ ಕೆಲಸ ಮಾಡಬೇಕಿದೆ ಎಂದು ನ್ಯೂ ದೆಹಲಿ ಜೆಎನ್ಯುನ ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಬಸ್ರೂರು ಮೂರುಕೈ ಬಳಿಯ ಆಶೀರ್ವಾದ ಸಭಾಂಗಣದಲ್ಲಿ ಶನಿವಾರ ‘ಘನತೆಯ ಬದುಕು: ಸಾಂಸ್ಕೃತಿಕ ಮಧ್ಯಪ್ರವೇಶ’ ವಿಚಾರವಾಗಿ ಎರಡು ದಿನಗಳ ಕಾಲ ನಡೆಯುತ್ತಿರುವ ಸಮುದಾಯ ಕರ್ನಾಟಕ 8 ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತುರ್ತು ಪರಿಸ್ಥಿತಿಯಂದ ಹಿಡಿದು ಅನೇಕ ಜನ ವಿರೋಧಿ ಘಟನೆಗಳನ್ನು ಸಮುದಾಯ ಖಂಡಿಸುತ್ತಾ ಬಂದಿದೆ. ಪ್ರಭುತ್ವದ ವಿರುದ್ಧವಾಗಿ ಸಮುದಾಯ ತನ್ನ ಧ್ವನಿಯನ್ನು ಗಟ್ಟಿಗೊಳಿಸುತ್ತಾ ಬಂದಿದ್ದು, ಪ್ರಭುತ್ವದಿಂದ ದೂರವಾಗಿ ಸಿಡಿದು ನಿಂತಾಗ ಮಾತ್ರ ಅತ್ಯುತ್ತಮವಾದ ಕಲೆ, ಬರಹ, ನಾಟಕ, ಚಿತ್ರಗಳು ಸೃಷ್ಟಿಯಾಗುತ್ತವೆ. ಪ್ರಭುತ್ವ ಧಿಕ್ಕರಿಸುವ ನಮ್ಮ ಶಕ್ತಿ ಇಂದು ಗೌಣವಾಗುತ್ತಿದ್ದು, ಪ್ರಪಂಚದಾದ್ಯಂತ ಪ್ರಭುತ್ವ ಧಿಕ್ಕರಿಸುವವರನ್ನು ನಾಶಮಾಡುವ ಶಕ್ತಿ ಬೆಳೆದು ನಿಂತಿದೆ. ಬೇರೆ ಬೇರೆ ಉದ್ದೇಶಗಳೊಂದಿಗೆ ರಾಜಕೀಯ ಇಚ್ಛಾಶಕ್ತಿಯನ್ನು ಮುಂದಿಟ್ಟುಕೊಂಡು ಧರ್ಮ, ದೇವರ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿದ್ದು, ಸೃಜನಶೀಲತೆ ನಾಶವಾಗುತ್ತಿದೆ ಎಂದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರಾಜರಾಮ್ ತಲ್ಲೂರು ಪ್ರಾಸ್ತಾವಿಕ ಮಾತನಾಡಿ, ಉದಾರೀಕರಣಗೊಂಡ ಜಗತ್ತು ಸಣ್ಣದಾಗುತ್ತಿದ್ದಂತೆ, ಹಿಂದೆ ಕೂಡು ಕುಟುಂಬವಾಗಿದ್ದ ಕರಾವಳಿಯ ಮನೆಗಳು ಕಳೆದ 60-70 ವರ್ಷಗಳಲ್ಲಿ ಮನಿ ಆರ್ಡರ್ ಎಕಾನಮಿ ತಂದುಕೊಟ್ಟ ಬದಲಾವಣೆ, ಹೊಸ ಆರ್ಥಿಕ ಯೋಜನೆಗಳು, ಅತಿಯಾದ ಸ್ವಾವಲಂಬನೆ, ಕುಟುಂಬ ಯೋಜನೆ, ಭೂ ಸುಧಾರಣೆ ಮೂಲಕ ದೊರೆತ ಆಸ್ತಿಯ ವಿಘಟನೆಗಳು ಕರಾವಳಿಯ ಚಹರೆಯನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಬದಲಾಯಿಸಿವೆ. ಇದರ ಪರಿಣಾಮ ಇಂದು ಕರಾವಳಿಯುದ್ದಕ್ಕೂ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ. ಅಭಿವೃದ್ಧಿ ಹೆಸರಲ್ಲಿ ನಾವು ಕೇಳದ ಕೈಗಾರಿಕೆ, ಉದ್ದಿಮೆಗಳನ್ನು ಇಲ್ಲಿ ಹೇರಲಾಗುತ್ತಿದೆ. ಈಗ ಆ ಉದ್ಯಮಗಳು ವಾತಾವರಣಕ್ಕೆ ವಿಷ ಉಣಿಸುತ್ತಿವೆ. ಇದರಿಂದ ಜನರಿಗೆ ಕ್ಯಾನ್ಸರ್ನಂತಹ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಬ್ಯಾಂಕಿಂಗ್ ತೊಟ್ಟಿಲು, ಶಿಕ್ಷಣದ ಮೆಟ್ಟಿಲು ಎನ್ನುವುದಾಗಿ ಕರೆಯಿಸಿಕೊಂಡಿದ್ದ ಕರಾವಳಿಯು ಈಗ ಕಾರ್ಪೋರೇಟ್ ಬಿರಿಯಾನಿಗಳ ಬಟ್ಟಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಲ್ಲಿನ ನೆಲ ಜಲ, ಆಕಾಶ ಕೈತಪ್ಪಿ ಕಾರ್ಪೊರೇಟರ್ ವಲಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಅಚ್ಯುತ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಮಂತ್ರಿತರಾಗಿ ಡಾ.ಎನ್.ಗಾಯತ್ರಿ, ಮಂಜುಳಾ, ಶ್ಯಾಮಲಾ ಪೂಜಾರ, ಸುಕನ್ಯಾ ಕೆ., ವೇದಾ, ಯಮುನಾ ಗಾಂವಕಾರ ಇದ್ದರು.

ಸಮುದಾಯ ಸ್ವಾಗತ ಸಮಿತಿ ಅಧ್ಯಕ್ಷ ರಾಜಾರಾಮ ತಲ್ಲೂರು ಪ್ರಸ್ತಾಪಿಸಿ ಸ್ವಾಗತಿಸಿದರು. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರ ಗೌಡ ಸಮನ್ವಯಕಾರರಾಗಿದ್ದರು. ಸಮ್ಮೇಳನದ ಕಾರ್ಯಾಧ್ಯಕ್ಷ ಉದಯ ಗಾಂವ್ಕರ್ ಕಾರ್ಯಕ್ರಮ ನಿರೂಪಿಸಿದರು.

ತಾಳಮದ್ದಲೆ ಮೂಲಕ ಉದ್ಘಾಟನೆ
ಸಮುದಾಯ ಸಮ್ಮೇಳನ ಯಕ್ಷಗಾನ ತಾಳಮದ್ದಳೆ ರಾಮಧಾನ್ಯ ಚೆರಿತೆ ಮೂಲಕ ಉದ್ಘಾಟನೆ ಗಮನ ಸೆಳೆಯಿತು. ಚಿಂತನಾ ಹೆಗಡೆ ಮಾಲ್ಕೋಡು ಭಾಗವತಿಕೆ, ಮದ್ದಲೆಯಲ್ಲಿ ಶಶಾಂಕ ಆಚಾರ್ಯ ಹಿಮ್ಮೇಳಕ್ಕೆ ಅರ್ಥಧಾರಿಗಳಾಗಿ ಡಾ.ಬಿಳಿಮಲೆ, ಜಬ್ಬಾರ್ ಸಮೋ ಸಂಪಾಜೆ, ಸದಾಶಿವ ಆಳ್ವಾ ತಲಪಾಡಿ, ಡಾ.ಜಗದೀಶ ಶೆಟ್ಟಿ, ಮಾಧವಿ ಭಂಡಾರಿ ಕೆರೆಕೋಣ, ಮುಷ್ತಾಕ್ ಹೆನ್ನಾಬೈಲು ಇದ್ದರು.

ಅಧಿವೇಶನ:
ವಾಸುದೇವ ಉಚ್ಚಿಲ ಅಧ್ಯಕ್ಷಕತೆಯಲ್ಲಿ ಘನತೆಯ ಬದುಕು ಹೋರಾಟದ ಹಾದಿ ಮೊದಲ ಅಧಿವೇಶನ ನಡೆಯಿತು. ಲಿಂಗತ್ವ ಸಮಾನತೆ ಹೋರಾಟಗಾರ್ತಿ ಅಕ್ಕೆ ಪದ್ಮಶಾಲಿ, ರೈತ ಮುಂದಾಳು ರವಿಕಿರಣ ಪುಣಚ, ಆದಿವಾಸಿ ಹಕ್ಕುಗಳ ಹೋರಾಟಗಾರ ಶ್ರೀಧರ ನಾಡ ವಿಷಯ ಮಂಡನೆ ಮಾಡಿದರು. ಸಮನ್ವಯ ಉಪಾಧ್ಯಕ್ಷ ಬಿ.ಐ.ಈಳಿಗೇರ, ರಾಜ್ಯ ಸಮಿತಿ ಜೊತೆ ಕಾರ್ಯದರ್ಶಿ ಇದ್ದರು. ವಿಮಲಾ ಕೆ.ಎಸ್., ಸಮನ್ವಯಕಾರರಾಗಿದ್ದರು. ಮಂಗಳೂರು ಜರ್ನಿ ಥೇಟರ್ ತಂಡದಿಂದ ರಂಗ ಹಾಡುಗಳ ಗಾಯನ ನಡೆಯಿತು.

ಘನತೆಯ ಬದುಕು ಕವಲು ದಾರಿ ರಾಜ್ಯ ಸಮಿತಿ ಕೋಶಾಧಿಕಾರಿ ವಸಂತರಾಜ ಎನ್.ಕೆ.ಅಧ್ಯಕ್ಷತೆಯಲ್ಲಿ ಎರಡನೇ ಸಮ್ಮೇಳನ ನಡೆಯಿತು. ಗಾಯಕಿ ಎಂ.ಡಿ.ಪಲ್ಲವಿ, ರಂಗಭೂಮಿ ಕಲಾವಿದೆ ಮಂಗಳಾ ಎನ್., ಸಿನಿಮಾ ನಿರ್ದೇಶಕ ಮಂಸೋರೆ ವಿಷಯ ಮಂಡನೆ ಮಾಡಿದರು. ಉಪಾಧ್ಯಕ್ಷ ಟಿ.ಸುರೇಂದ್ರ ರಾವ್, ಜೊತೆ ಕಾರ್ಯದರ್ಶಿ ಶಶಿಧರ ಜೆ.ಸಿ., ಇದ್ದು ಜೊತೆ ಕಾರ್ಯದರ್ಶಿ ಉದಯ ಗಾಂವಕಾರ ಸಮನ್ವಯಕಾರರಾಗಿದ್ದರು. ಕುಂ.ವೀರಭದ್ರಪ್ಪ ಕತೆ, ವಾಸುದೇವ ಬಂಗೇರ ನಿರ್ದೇಶನದಲ್ಲಿ ಸಮುದಾಯ ಧಾರವಾಡ ಕಲಾವಿದರಿಂದ ದೇವರ ಹೆಣ ನಾಟಕ ನಡೆಯಿತು.

Exit mobile version