ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ದೋಣಿ ಮಗುಚಿ ಇಬ್ಬರು ಮೀನುಗಾರರು ಮೃತಪಟ್ಟ ಘಟನೆ ಶಿರೂರು ಕಳುಹಿತ್ಲು ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ದೋಣಿಯಲ್ಲಿದ್ದ ಹಡವಿನಕೋಣೆ ಅಬ್ಬುಲ್ ಸತ್ತರ್ (45 ) ಹಾಗೂ ಭಟ್ಕಳದ ಮಿಸ್ಸಾ ಯೂಸುಫ್ (48) ಮೃತಪಟ್ಟಿದ್ದಾರೆ.
ಭಾನುವಾರ ರಾತ್ರಿ 10ಗಂಟೆಗೆ ಶಿರೂರು ಕಳುಹಿತ್ಲುವಿನನಿಂದ ಮೀನುಗಾರಿಕೆಗೆ ತೆರಳಿದ ನುಮೈರಾ ಅಂಜುಮ್ ದೋಣಿಯಲ್ಲಿ 3 ಜನ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ಸಂದರ್ಭ ತಡರಾತ್ರಿ 01:30ರ ವೇಳಿಗೆ ಕಳುಹಿತ್ತು ಅಳಿವೆ ಸಮೀಪ ದೋಣಿ ಮಗುಚಿ ಇಬ್ಬರು ಮೃತಪಟ್ಟಿದ್ದಾರೆ.
ದೋಣಿಯಲ್ಲಿದ್ದ ಮತ್ತೋರ್ವ ಮೀನುಗಾರ ಹಡವಿನಕೋಣೆಯ ಬುಡು ಮುಖಾರ್ (37) ಅವರನ್ನು ಇನ್ನೊಂದು ದೋಣಿಯಲ್ಲಿದ್ದ ಮಾಮ್ಮು ಯಾಕೂಬ್ ಎಂಬುವವರು ರಕ್ಷಣೆ ಮಾಡಿದ್ದಾರೆ.
ಕರಾವಳಿ ಕಾವಲು ಪಡೆ ಹಾಗೂ ಬೈಂದೂರು ಪೊಲೀಸ್ ಠಾಣೆಯ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ತಿಂಗಳ ಹಿಂದಷ್ಟೇ ಇದೇ ಪ್ರದೇಶದಲ್ಲಿ ದೋಣಿ ಮಗುಚಿ ಇಬ್ಬರು ಮೀನುಗಾರರು ಮೃತಪಟ್ಟಿದ್ದರು. ತಾಲೂಕಿನ ಶಿರೂರು, ಉಪ್ಪುಂದ, ಕೊಡೇರಿ ಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಹಲವು ದೋಣಿ ದುರಂತ ಸಂಭವಿಸಿದ್ದು, ಮೀನುಗಾರರು ಪ್ರಾಣಕಳೆದುಕೊಂಡಿದ್ದರು.