Kundapra.com ಕುಂದಾಪ್ರ ಡಾಟ್ ಕಾಂ

ರಜತ ಸಂಭ್ರಮದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆ ಮರವಂತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಮರವಂತೆಯ ಮಕ್ಕಳಿಗೆ ಊರಿನಲ್ಲೇ ಪ್ರೌಢಶಾಲಾ ಶಿಕ್ಷಣ ಸಿಗಬೇಕು ಎಂದು ಆಶಿಸಿದ ಅಲ್ಲಿನ ಶಿಕ್ಷಣಾಭಿಮಾನಿಗಳ ಪ್ರಯತ್ನ 1996ರಲ್ಲಿ ಫಲ ನೀಡಿತು. ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ಎಂಬ ವಿಶೇಷ ಹೆಸರು ಹೊತ್ತು ಅಂದು ಆರಂಭವಾದ ಈ ಶಾಲೆ 27 ವರ್ಷಗಳ ಸಾರ್ಥಕ ಸೇವೆಯ ಬಳಿಕ ಇದೇ ೨೩ರಂದು ತನ್ನ ರಜತ ಸಂಭ್ರಮ ಆಚರಿಸುತ್ತಿದೆ.

ಶಾಲೆಯ ಸ್ಥಾಪನೆಗೆ ಶ್ರಮಿಸಲು 1994ರಲ್ಲಿ ಎಸ್. ಜನಾರ್ದನ ಮರವಂತೆ ಅವರ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟ ಪ್ರೌಢಶಾಲಾ ಸಂಸ್ಥಾಪನಾ ಸಮಿತಿಯು ಅಂದಿನ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಎಂ. ರವೀಂದ್ರ ಖಾರ್ವಿ ಮರವಂತೆ ಅವರ ಬೆಂಬಲದೊಂದಿಗೆ ಕಾರ್ಯೋನ್ಮುಖವಾಯಿತು. 1996ರಲ್ಲಿ ರಾಜ್ಯ ಸರಕಾರವು ರಾಜ್ಯದ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಒಂದರಂತೆ ಪ್ರೌಢಶಾಲೆ ಮಂಜೂರು ಮಾಡಿದಾಗ ಅಂದಿನ ಶಾಸಕ ಐ. ಎಂ. ಜಯರಾಮ ಶೆಟ್ಟಿ ಅವರು ಈ ಸಮಿತಿಯ ಒತ್ತಡಕ್ಕೆ ಮಣಿದು, ತಮ್ಮ ವಿವೇಚನೆಗೆ ಒದಗಿದ ಶಾಲೆಯನ್ನು ಮರವಂತೆಗೆ ದಯಪಾಲಿಸಿದರು. ಅಲ್ಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದರ ತರಗತಿಗಳು ಆರಂಭವಾದುವು. 1998ರಲ್ಲಿ ನೇತಾಜಿ ಅವರ ಜನ್ಮ ಶತಾಬ್ಧಿಯ ಕಾರಣ ಈ ಶಾಲೆಗೆ ಸ್ವಂತ ಕಟ್ಟಡ ಮಂಜೂರಾಯಿತು. ಅದಾಗಲೆ ಸಮಿತಿಯ ಪ್ರಯತ್ನದಿಂದ ಮರವಂತೆಯ ಹೃದಯ ಭಾಗವಾಗಿರುವ ಗಾಂಧಿನಗರದಲ್ಲಿ ಐದು ಎಕ್ರೆ ವಿಸ್ತಾರದ ನಿವೇಶನ ಗುರುತಿಸಲ್ಪಟ್ಟಿತು. ಎಂ. ಎಸ್. ಶೇಷ ಖಾರ್ವಿ ಅಧ್ಯಕ್ಷತೆಯ ಕಟ್ಟಡ ನಿರ್ಮಾಣ ಸಮಿತಿ 2001ರಲ್ಲಿ ನಿರ್ಮಾಣ ಕಾರ್ಯ ಮುಗಿಸಿತು. ಆ ವರ್ಷ ಜುಲೈಯಲ್ಲಿ ಶಾಲೆಯು ನೂತನ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ಇಲ್ಲಿ ಸಂಸದ ಆಸ್ಕರ್ ಫೆರ್ನಾಂಡೀಸ್ ಅವರ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಾವಿ ನಿರ್ಮಾಣವಾದರೆ, ಗಂಗೊಳ್ಳಿ ರೋಟರಿ ಕ್ಲಬ್ ಅಂತಾರಾಷ್ಟ್ರೀಯ ರೋಟರಿ ಸಹಾಯ ನಿಧಿಯ ನೆರವಿನಿಂದ ಕುಡಿಯುವ ನೀರು ಪೂರೈಕೆ ಮತ್ತು ಶೌಚಾಲಯ ಸಂಕೀರ್ಣ ನಿರ್ಮಿಸಿಕೊಟ್ಟಿತು. ಇತ್ತೀಚೆಗೆ ಎಸ್. ಜನಾರ್ದನ ಕುಟುಂಬ ಐ. ವಸಂತಕುಮಾರಿ ಕಲಾಂಗಣ ಹೆಸರಿನ ಸುಂದರ ರಂಗಮಂಟಪ ನಿರ್ಮಿಸಿಕೊಟ್ಟಿದೆ. ಅದರ ಮುಂದುಗಡೆ ಜಿಪಂ ಸದಸ್ಯ ಬಾಬು ಶೆಟ್ಟಿ ಅವರ ಅನುದಾನದಲ್ಲಿ ಶಾಶ್ವತ ಚಪ್ಪರ ನಿರ್ಮಾಣವಾಗಿದೆ.

ಈ ಶಾಲೆಯನ್ನು ಕಾಲಕಾಲಕ್ಕೆ ಮುನ್ನಡೆಸಿದ ಮುಖ್ಯೋಪಾಧ್ಯಾಯರಾದ ಐ. ವಸಂತಕುಮಾರಿ, ಜ್ಯೋತಿ ಬೈಂದೂರು, ಚಂದ್ರಶೇಖರ ಶೆಟ್ಟಿ, ಕೆ. ವಿಘ್ನೇಶ್ವರ, ಹುದ್ದೆಯ ಪ್ರಭಾರ ನಿರ್ವಹಿಸಿದ ಡಿ. ಕೃಷ್ಣಪ್ಪ, ಸುಬ್ಬಣ್ಣ ಉಡುಪ, ಜಯಶೀಲಾ ನಾಯಕ್, ಸರ್ವೋತ್ತಮ ಭಟ್ ಸಹಶಿಕ್ಷಕರ ಮತ್ತು ಸಿಬ್ಬಂದಿಯ ನೆರವಿನೊಂದಿಗೆ ಹಂತಹಂತವಾಗಿ ಅನ್ಯ ಮೂಲ ಸೌಲಭ್ಯಗಳನ್ನು ಸೃಜಿಸಿಕೊಂಡರು. ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿ ಸಾಲಿನಲ್ಲೂ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಂಡರು. ಈಗ ಇಲ್ಲಿ ವಿದ್ಯಾರ್ಥಿ ಸಂಖ್ಯೆ ಮಿತವಾಗಿದ್ದರೂ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಬೋಧನೆ ನಡೆಯುತ್ತಿದೆ. ಈ ಸಾಲಿನಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದಿದೆ.

ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಶಿಕ್ಷಣಾಭಿಮಾನಿ ದಯಾನಂದ ಬಳೆಗಾರ್ ಅಧ್ಯಕ್ಷತೆಯ ಸಮಿತಿ ಟೊಂಕ ಕಟ್ಟಿದೆ. ಅವರೊಂದಿಗೆ ಕಾರ್ಯದರ್ಶಿಯಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಮಡಿವಾಳ ಕೈಜೋಡಿಸಿದ್ದಾರೆ. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಪಟಗಾರ್ ನೇತೃತ್ವದಲ್ಲಿ ಹಿಂದಿನ ವಿದ್ಯಾರ್ಥಿಗಳು ಬೆಂಬಲಕ್ಕೆ ನಿಂತಿದ್ದಾರೆ. ಊರ, ಪರ ಊರ ದಾನಿಗಳು ಔದಾರ್ಯ ಮೆರೆಯತ್ತಿದ್ದಾರೆ. ಅದ್ದೂರಿಯ ಹಬ್ಬಾಚರಣೆಯ ಜತೆಗೆ ರೂ 2 ಲಕ್ಷ ವೆಚ್ಚದಲ್ಲಿ ಶಾಲೆಯನ್ನು ಸುಂದರಗೊಳಿಸುವ ಕಾರ್ಯ ನಡೆದಿದೆ. ರೂ 1 ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಕೊಡುಗೆ ಪಡೆಯಲಾಗಿದೆ. ಹಳೆ ವಿದ್ಯಾರ್ಥಿಗಳು ಪ್ರಯೋಗಾಲಯ ನೀಡುತ್ತಿದ್ದಾರೆ. ಎಲ್ಲರೂ ಶಾಲೆಯನ್ನು ಮಾದರಿಯಾಗಿ ರೂಪಿಸಿ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುವ ಗುರಿ ಸಾಧನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಬೆಳಗ್ಗೆ 9ರಿಂದ : ಗ್ರಾಪಂ ಅಧ್ಯಕ್ಷ ಲೋಕೇಶ ಖಾರ್ವಿ ಅವರಿಂದ ಧ್ವಜಾರೋಹಣ; ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಮಡಿವಾಳ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ. ಸ್ಮಾರ್ಟ್ ಕ್ಲಾಸ್ ಉದ್ಘಾಟನೆ, ಗುರುವಂದನೆ, ಬಹುಮಾನ ವಿತರಣೆ, ಅಭಿನಂದನೆ. ಅತಿಥಿ ಪ್ರಮುಖರು : ವಿದ್ಯಾಂಗ ಉಪ ನಿರ್ದೇಶಕ ಕೆ. ಗಣಪತಿ, ಜಿ.ಪಂ. ಮಾಜಿ ಸದಸ್ಯ ಕೆ. ಬಾಬು ಶೆಟ್ಟಿ, ತಾಪಂ ಮಾಜಿ ಸದಸ್ಯ ಜಗದೀಶ ಪಿ. ಹಕ್ಕಾಡಿ, ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳು.

ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
7ರಿಂದ ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ. ಪ್ರಯೋಗಾಲಯ ಹಸ್ತಾಂತರ, ವಿಶೇಷ ದಾನಿಗಳಿಗೆ ಸನ್ಮಾನ, ಹಿಂದಿನ ಎಸ್ಡಿಎಂಸಿ ಅಧ್ಯಕ್ಷರಿಗೆ ಸನ್ಮಾನ, ಸಾಧಕ ವಿದ್ಯಾರ್ಥಿ ಪುರಸ್ಕಾರ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು.

ಅತಿಥಿ ಪ್ರಮುಖರು : ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಗ್ರಾಪಂ ಅಧ್ಯಕ್ಷ ಲೋಕೇಶ ಖಾರ್ವಿ, ಆರ್. ಕೆ. ಸಂಜೀವ ರಾವ್ ಟ್ರಸ್ಟ್ನ ಸಂಜೀತ ಪ್ರಕಾಶ ರಾವ್, ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ, ಕೆ. ಗೋಪಾಲ ಪೂಜಾರಿ, ಬಿ. ಎಂ. ಸುಕುಮಾರ ಶೆಟ್ಟಿ, ಬಿಇಒ ನಾಗೇಶ ನಾಯ್ಕ್, ಸಹಕಾರಿ ಧುರೀಣ ಎಸ್. ರಾಜು ಪೂಜಾರಿ, ಉದ್ಯಮಿಗಳಾದ ಬಿ. ಎಸ್. ಸುರೇಶ ಶೆಟ್ಟಿ, ರಾಮಕೃಷ್ಣ ಮಾಲೂರು, ಎಂ. ರಾಜಶೇಖರ ಹೆಬ್ಬಾರ್ ಮತ್ತಿತರ ಗಣ್ಯರು. ಸ್ವಸ್ತಿವಾಚನ : ಸಂತೋಷ್ ಕುಮಾರ್.

Exit mobile version