Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಕಂಬಳ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ಕ್ಷೇತ್ರದಲ್ಲಿ ಹಿಂದುಳಿದ ಹಾಗೂ ಸಣ್ಣ ಸಮಾಜಗಳನ್ನು ಶಿಕ್ಷಣ, ಸಾಮಾಜಿಕ ಸ್ಥಾನಮಾನದ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ಬೈಂದೂರು ಕಂಬಳ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಗ್ರಾಮೀಣ ಭಾಗದ ಮರಾಠಿ ಹಾಗೂ ಗೊಂಡ ಸಮುದಾಯದ ಪ್ರಾತಿನಿಧ್ಯದೊಂದಿಗೆ ನಡೆಯುತ್ತಿರುವ ಬೈಂದೂರು ಕಂಬಳದ ಕಲ್ಪನೆಯೇ ವಿಶಿಷ್ಟವಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ದೀಪಕ್ ಕುಮಾರ್ ಶೆಟ್ಟಿ ಅವರ ಬಗ್ಗೆ ಸಣ್ಣ ಸಮಾಜಗಳಲ್ಲಿ ವಿಶ್ವಾಸ ಹೆಚ್ಚಿದೆ. ಅಂತಹ ಮರಾಠಿ ಹಾಗೂ ಗೊಂಡ ಸಮಾಜವನ್ನು ಮುನ್ನೆಲೆಯಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನಾರ್ಹ. ಈ ವಿಶಿಷ್ಟ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ ಅವರು ಮಾತನಾಡಿ, ರಾಜ್ಯ ಮಟ್ಟದ ಕಂಬಳೋತ್ಸವಕ್ಕೆ ಸಕಲ ತಯಾರಿಗಳು ನಡೆಯುತ್ತಿದ್ದು ಕರಾವಳಿ ಜಿಲ್ಲೆಗಳಿಗೆ ಕೋಣಗಳು ಬರಲಿದೆ. ಕಂಬಳೋತ್ಸವದ ಅಂಗವಾಗಿ ಗಂಗಾನಾಡು ಕ್ಯಾರ್ತೂರು ಗ್ರಾಮ ವಿದ್ಯುದೀಪಗಳಿಂದ ಅಲಂಕಾರಗೊಳ್ಳಲಿದೆ. ವೈಭವದ ಮೆರವಣಿಗೆ, ಜನಪದ ಸಂಸ್ಕೃತಿ ಅನಾವರಣ ನಡೆಯಲಿದೆ ಎಂದರು.

ಬೈಂದೂರು ಕಂಬಳ ಸಮಿತಿಯ ಗಣಪ ಮರಾಠಿ ಮಾತನಾಡಿ, ಕಂಬಳಕ್ಕಾಗಿ ಹೊಸತಾಗಿ ಕಂಬಳಗದ್ದೆ ಸಜ್ಜಾಗುತ್ತಿದೆ. ಗ್ರಾಮೀಣ ಭಾಗದ ಕೆಸರುಗದ್ದೆಯಲ್ಲಿ ಸಾಂಪ್ರದಾಯಿಕ ಕಂಬಳವನ್ನು ನೋಡುವುದೇ ಚಂದ. ರೈತರು ಹಾಗೂ ಪ್ರಾಣಿಗಳ ಸಬಂಧವನ್ನು ತೋರಿಸುವ ಕಂಬಳ ಇದಾಗಲಿದೆ ಎಂದರು.

Exit mobile version