Kundapra.com ಕುಂದಾಪ್ರ ಡಾಟ್ ಕಾಂ

ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಾರ್ಕಳ:
ಕಾರ್ಕಳದ ಹಿರ್ಗಾನದ ಮೂರೂರಿನಲ್ಲಿ ಬಿ ಎಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಬಿರದ ಸಮಾರೋಪ ಊರಿನ ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಹಾಲಕ್ಮೀ ದೇವಸ್ಥಾನದ ಮುಕ್ತೇಸರರಾದ ಶ್ರೀ ಅಶೋಕ್‌ ನಾಯಕ್‌ ರವರು ಇಂತಹ ಶಿಬಿರಗಳಿಂದ ಊರಿನ ಅಭಿವೃದ್ಧಿಯ ಜೊತೆಗೆ ಸಮಾಜದಲ್ಲಿ ಒಂದು ಧನಾತ್ಮಕ ಬದಲಾವಣೆ ಬರಲು ಸಾಧ್ಯವಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಸಹಕಾರ, ಸಹಬಾಳ್ವೆಯ ಅರಿವು ಉಂಟಾಗುತ್ತದೆ. ಯಾವಾಗಲು ನಾವೆಲ್ಲರೂ ಒಂದು ಎಂಬ ಭಾವದಿಂದ ಸಮಾಜಕ್ಕಾಗಿ ದುಡಿಯ ಬೇಕು ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಶಿಬಿರದ ಆರಂಭ ಸವಾಲಿನ ಕೆಲಸವಾಗಿದ್ದರು ಊರಿನ ಗಣ್ಯರು, ಮಹನೀಯರ ಮತ್ತು ದಾನಿಗಳಿಂದ ಈ ಕಾರ್ಯ ಯಶಸ್ವಿಯಾಗಲು ಕಾರಣವಾಯಿತೆಂದು ಅಭಿಪ್ರಾಯ ವ್ಯಕ್ತಪಡಿಸಿ ಈ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರನ್ನು ಸ್ಮರಿಸಿದರು.

ಬಿ. ಎಂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ಕ್ಲೇರಾ ವಾಸ್‌ ಮಾತನಾಡಿ ನಮ್ಮ ಶಾಲೆಯಲ್ಲಿ ನಡೆದ ಈ ಶಿಬಿರವು ಅಭೂತಪೂರ್ವವಾಗಿ ನಡೆದಿದೆ. ಕ್ರಿಯೇಟಿವ್‌ ಕಾಲೇಜಿನ ಎಲ್ಲರೂ ಅತ್ಯಂತ ಸಹಕಾರ ಮನೋಭಾವದಿಂದ ಎಂಟು ದಿನಗಳ ಕಾಲ ಇದ್ದು ಅನೇಕ ವಿಚಾರಗಳನ್ನು ಕಲಿತರು. ಜೀವನದ ಅನುಭವಗಳನ್ನು ಗಳಿಸಿದರು. ಮುಂದೆಯೂ ವಿದ್ಯಾರ್ಥಿಗಳು ತಮ್ಮ ವಿನಯವಂತಿಕೆಯಿಂದ ಜೀವನದಲ್ಲಿ ಮುಂದೆ ಬರುವಂತಾಗಲಿ ಎಂದು ಹಾರೈಸಿದರು.

ಪ್ರಾಚಾರ್ಯರಾದ ವಿದ್ವಾನ್‌ ಗಣಪತಿ ಭಟ್‌ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಸುಖಗಳು ಸಾಮಾನ್ಯ. ಕಷ್ಟ ಬಂದಾಗ ಹೆದರದೆ ಎದುರಿಸಿ ಗೆಲ್ಲುವುದನ್ನು ಕಲಿಯಬೇಕು. ಕಷ್ಟದಿಂದ ಪಡೆದ ಫಲ ಅತ್ಯಂತ ಮೌಲ್ಯವನ್ನು ಹೊಂದಿದೆ. ಸೋಲು ಗೆಲುವಿನ ಆರಂಭದ ಹಂತ ಎಂದು ಕಿವಿ ಮಾತು ಹೇಳಿದರು.

ಹಿರ್ಗಾನ ಗ್ರಾಮ ಪಂಚಾಯತ್‌ ನ ಮಾಜಿ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿಯವರು ಊರವರ ಪರವಾಗಿ ಶಿಬಿರಾರ್ಥಿಗಳನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಗಣ್ಯರಾದ ಸಿರಿಯಣ್ಣ ಶೆಟ್ಟಿ, ಚೇತನ್‌ ಶೆಟ್ಟಿ ಕೊರಳ, ಹೋಟೆಲ್‌ ಬಾಲಾಜಿ ಇನ್‌ ನ ಮಾಲಕ ಸತೀಶ್‌ ಹೆಗ್ಡೆ, ಮಾಜಿ ಗ್ರಾಮ ಪಂಚಾಯತ್‌ ಸದಸ್ಯೆ ರೇವತಿ ಶೆಟ್ಟಿ, ಗ್ರಾಮ ಪಂಚಾಯತ್‌ ಸದಸ್ಯೆ ಸುಜಾತ ನಾಯಕ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಶಿವಕುಮಾರ್‌ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಚಂದ್ರಕಾಂತ್‌ ದಾನಿಗಳ ವಿವರ ನೀಡಿದರು. ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ಉಮೇಶ್‌ ವಂದನಾರ್ಪಣೆ ಗೈದರು.

Exit mobile version