ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಮ್ಮ ದೇಶದ ಮೇಲೆ ಅದೆಷ್ಟೋ ಆಕ್ರಮಣಗಳು ನಡೆದಿದ್ದರೂ ನಮ್ಮ ದೇಶದ ಸಂಸ್ಕೃತಿ ಪರಂಪರೆ ಗಟ್ಟಿಯಾಗಿ ಉಳಿದಿದೆ. ಧರ್ಮ ಮತ್ತು ಸಂಸ್ಕೃತಿಯ ಭದ್ರ ತಳಹದಿಯ ಮೇಲೆ ನಮ್ಮ ದೇಶ ಸದೃಢವಾಗಿ ನಿಂತಿದ್ದು, ಜಗತ್ತಿನ ಎಲ್ಲಾ ರಾಷ್ಟ್ರಗಳು ನಮ್ಮ ಭಾರತ ದೇಶವನ್ನು ಎದುರು ನೋಡುತ್ತಿದೆ. ಮಾತೆಯನ್ನು ಪೂಜಿಸಿ ಗೌರವಿಸುವ ನಮ್ಮ ನಾಡು ಅತ್ಯಂತ ಶ್ರೇಷ್ಠವಾಗಿದ್ದು, ಪುಟ್ಟ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವ ದೃಷ್ಟಿಯಿಂದ ಅಜಿತ್ ಕುಮಾರರು ಶಿಶು ಮಂದಿರವನ್ನು ಪ್ರಾರಂಭಿಸಿದ್ದರು. ಇದರ ಫಲವಾಗಿ ಇಂದು ಸಹಸ್ರಾರು ಮಕ್ಕಳು ಸಂಸ್ಕಾರವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುವಲ್ಲಿ ಸಹಕಾರಿಯಾಗಿದೆ ಎಂದು ಕುಂದಾಪುರ ಸೇವಾ ಸಂಗಮ ಟ್ರಸ್ಟ್ನ ವಿಶ್ವಸ್ಥ ಪ್ರಮೋದ ಮಂದಾರ್ತಿ ಹೇಳಿದರು.
ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಮತ್ತು ಶ್ರೀ ಇಂದುಧರ ದೇವಸ್ಥಾನ ಗಂಗೊಳ್ಳಿ ಹಾಗೂ ಇಂದುಶ್ರೀ ಮಹಿಳಾ ಮಂಡಲ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿದ ಸೇವಾ ದಿನಾಚರಣೆ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ ಅವರು ಮಾತನಾಡಿದರು.
ಶಿಇಂದುಧರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಜಿ.ಟಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಗೋಪಾಲ ಪೂಜಾರಿ ಶುಭ ಹಾರೈಸಿದರು. ಇದೇ ಸಂದರ್ಭ ರಾಷ್ಟ್ರ ಮಟ್ಟದ ಕ್ರೀಡಾಪಟು ವೈಷ್ಣವಿ ಖಾರ್ವಿ ಮತ್ತು ರಾಜ್ಯ ಮಟ್ಟದ ಕ್ರೀಡಾಪಟು ಪ್ರಾರ್ಥನಾ ಪೈ ಅವರನ್ನು ಸನ್ಮಾನಿಸಲಾಯಿತು ಮತ್ತು ಶಿಶು ಮಂದಿರದ ಮಾತಾಜಿ ಪ್ರೇಮಾ ಮತ್ತು ರತ್ನಾ ಅವರನ್ನು ಗೌರವಿಸಲಾಯಿತು. ದೇವಸ್ಥಾನದ ಮಾಜಿ ಅಧ್ಯಕ್ಷ ನರಸಿಂಹ ಕೆ., ಅರ್ಚಕ ಶಿವಾನಂದ ಜಿ.ಟಿ., ಈಶ್ವರ ಜಿ., ರಾಘವೇಂದ್ರ ಜಿ.ಟಿ., ಕಾರ್ಯದರ್ಶಿ ಶ್ರೀಕಾಂತ ಎನ್., ಮಹಿಳಾ ಮಂಡಲದ ಸರೋಜ ಜಿ.ಟಿ., ಸುಮಿತ್ರಾ, ಸುಶೀಲಾ ಜಿ.ಟಿ. ಶಿಶು ಮಂದಿರದ ಸದಸ್ಯರಾದ ಸವಿತಾ ಯು.ದೇವಾಡಿಗ, ಉಷಾ ಪಿ.ಮಡಿವಾಳ, ವಿಜಯಶ್ರೀ ವಿ.ಆಚಾರ್ಯ, ವಸಂತಿ ಎನ್.ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
ಶಿಶು ಮಂದಿರದ ಅಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಸಂಚಾಲಕ ಡಾ.ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ವಂದಿಸಿದರು.

