Kundapra.com ಕುಂದಾಪ್ರ ಡಾಟ್ ಕಾಂ

ವಿಶ್ವಕರ್ಮರು ‌ಶಿಕ್ಷಣದೊಂದಿಗೆ ಪಂಚ ಕುಲಕಸುಬಿನ ಬಗ್ಗೆ ಆಸಕ್ತಿ ವಹಿಸುವಂತಾಗಬೇಕು: ಕಾಳಹಸ್ತೇಂದ್ರ ಶ್ರೀ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವಿಶ್ವಕರ್ಮರು ಸ್ಥಾನಕ್ಕಾಗಿ ಕೆಲಸಮಾಡದೇ ಆತ್ಮ ತೃಪ್ತಿಗಾಗಿ ಕೆಲಸಮಾಡುವವರಾಗಿದ್ದಾರೆ. ರಾಜಕೀಯವಾಗಿ ನಮಗೆ ಯಾವುದೇ ಬೆಂಬಲವಿಲ್ಲದಿದ್ದರೂ ಸರ್ಕಾರವನ್ನು ಅವಲಂಬಿಸದೇ ಸ್ವಂತ ಪ್ರತಿಭೆ, ಬಲ ಹಾಗೂ ಪರಿಶ್ರಮದಿಂದ ಬೆಳೆದು ಸರಕಾರ – ಸಮಾಜಕ್ಕೆ ಕೊಡುಗೆ ನೀಡುವಂತವರಾಗಬೇಕು ಎಂದು ಕಟಪಾಡಿ ಪಡುಕುತ್ಯಾರು ಶ್ರೀಮತ್ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠಾಧಿಪತಿ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಬೈಂದೂರು ರೋಟರಿ ಭವನದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಬೈಂದೂರು ಇದರ 14ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ, ಆಶೀರ್ವಚಿಸಿ ಮಾತನಾಡಿ ಶಿಕ್ಷಣದ ಜೊತೆಗೆ ದೈವದತ್ತವಾಗಿ ಬಂದಿರುವ ಪಂಚ ಕುಲಕಸುಬನ್ನು ಸರಿಯಾಗಿ ಬಳಸಿ ಬೆಳೆಸಿ ನಮ್ಮ ಮುಂದಿನ ಜನಾಂಗಕ್ಕೆ ದೊಡ್ಡ ಆಸ್ತಿಯನ್ನು ನೀಡುವಂತಾಗಬೇಕು ಎಂದರು.

ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರ ಆಚಾರ್ಯ ಮಾತನಾಡಿ, ವಿಶ್ವಕರ್ಮ ಜನಾಂಗಕ್ಕೆ ನೈಪುಣ್ಯತೆಯು ಪರಂಪರಾಗತವಾಗಿ, ರಕ್ತಗತವಾಗಿ ಬಂದಿರುವ ಕಲೆಯಾಗಿದೆ. ಹಲವಾರು ವಿಸ್ಮಯಗಳನ್ನು ಜಗತ್ತಿಗೆ ನೀಡಿರುವ ವಿಶ್ವಕರ್ಮರು ಬೇಲೂರು, ಹಳೆಬೀಡು, ಶ್ರವಣಬೆಳಗೂಳ, ಹಂಪಿ, ಅಜಂತ, ಎಲ್ಲೊರಾ ಮುಂತಾದ ಪ್ರದೇಶಗಳಲ್ಲಿ ಶಿಲ್ಪಕಲೆಗಳನ್ನು ನಿರ್ಮಿಸಿ ಪ್ರವಾಸೋದ್ಯಮದ ಮೂಲಕ ದೇಶಕ್ಕೆ ಹೆಚ್ಚಿನ ಆದಾಯ ತರುವಲ್ಲಿ ವಿಶ್ವಕರ್ಮರ ಪಾತ್ರ ಬಹುಮುಖ್ಯವಾಗಿದೆ. ದೇಶದ ಹೆಮ್ಮೆಯ ಅಯೋಧ್ಯ ರಾಮಮಂದಿರದ ರಥವನ್ನು ನಮ್ಮ ಜಿಲ್ಲೆಯ ಶಿಲ್ಪಿ ಲಕ್ಷ್ಮಣ ಆಚಾರ್ಯರು ನಿರ್ಮಿಸಿದ್ದು ಇದು ವಿಶ್ವಕರ್ಮರ ನೈಪುಣ್ಯತೆಗೆ ಸಾಕ್ಷಿಯಾಗಿದೆ ಎಂದರು.

ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧಕ್ಷ ನಾರಾಯಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ ಆಲೂರು, ಐ.ಎ.ಎಸ್ ಮತ್ತು ಕೆ.ಎ.ಎಸ್. ಪರೀಕ್ಷಾ ತರಬೇತುದಾರರಾದ ಅನಿತಾಲಕ್ಷ್ಮೀ ಆಚಾರ್ಯ ಚಿತ್ರದುರ್ಗ, ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಆಚಾರ್ಯ, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಮಹಿಳಾ ಸಮಿತಿ ಅಧ್ಯಕ್ಷೆ ಶೈಲಾ ರಾಮಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರು ಹಾಗೂ 2023-24ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬು ಆಚಾರ್ಯ ಮಡ್ಲಗೇರಿ ಇವರನ್ನು ಸನ್ಮಾನಿಸಲಾಯಿತು. ಸಂಘದ ವತಿಯಿಂದ ಉಪ್ರಳ್ಳಿ ಕಾಳಿಕಾಂಬಾ ದೇವರ ಸ್ವರ್ಣ ಮುಖವಾಡಕ್ಕೆ ಹಾಗೂ ಮರವಂತೆ ವಿಶ್ವಕರ್ಮ ಸಂಘದ ಸಭಾಭವನ ನಿರ್ಮಾಣಕ್ಕೆ ದೇಣಿಗೆಯನ್ನು ನೀಡಲಾಯಿತು.

ಮಹಿಳಾ ಸಮಿತಿಯ ಸದಸ್ಯೆಯರು ಪ್ರಾರ್ಥಿಸಿದರು. ಕಾರ್ಯದರ್ಶಿ ನಾಗರಾಜ ಆಚಾರ್ಯ ಬಿಜೂರು ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ವಿಶ್ವನಾಥ ಆಚಾರ್ಯ ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿ, ಲಕ್ಷ್ಮಣ ಆಚಾರ್ಯ ನಾಯ್ಕನಕಟ್ಟೆ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಹಾಗೂ ರಿಧಂ ನೃತ್ಯ ಮತ್ತು ಕಲಾ ಶಾಲೆ ಬೈಂದೂರು ಇವರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು.

Exit mobile version