ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲೆ ಸಂಸ್ಕೃತಿಯು ಊರಿಗೊಂದು ಪ್ರಾತಿನಿದ್ಯವನ್ನು ನೀಡುತ್ತದೆ. ರಾಜ್ಯದ ವಿವಿಧ ಕಲಾಪ್ರಕಾರಗಳನ್ನು ಆಸ್ವಾದಿಸುವ ಜೊತೆಗೆ ಕಲಾವಿದರಿಂದ ಪ್ರೇರಣೆಗೊಂಡು ನಮ್ಮಲ್ಲಿಯ ಪ್ರತಿಭೆಗಳೂ ರಾಜ್ಯ ಮಟ್ಟಕ್ಕೆ ಹೋಗುವಂತಾಗಬೇಕು ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಲಾವಣ್ಯ ರಿ. ಬೈಂದೂರು, ಸುರಭಿ ರಿ. ಬೈಂದೂರು ಇವರ ಸಹಯೋಗದೊಂದಿಗೆ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ರಂಗಮಂದಿರದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೈಂದೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದೆ. ನವೆಂಬರ್ 1ರಂದು ಬೈಂದೂರಿನಲ್ಲಿ ಕನ್ನಡ ಉತ್ಸವ ಜರುಗಬೇಕು ಇದಕ್ಕೂ ಇಲಾಖೆಯ ಸಹಕಾರ ಇರಲಿ ಎಂದರು.
ಬೈಂದೂರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಪಿ. ನಾಯ್ಕ್, ಉಪಪ್ರಾಂಶುಪಾಲರಾದ ಪದ್ಮನಾಭ ಪಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಲಾವಣ್ಯ ಬೈಂದೂರು ಅಧ್ಯಕ್ಷ ಬಿ. ನರಸಿಂಹ ನಾಯಕ್, ಸುರಭಿ ಬೈಂದೂರು ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುರಭಿ ನಿರ್ದೇಶಕರಾದ ಸುಧಾಕರ ಪಿ. ಬೈಂದೂರು ವಂದಿಸಿದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಬೈಂದೂರು ಶ್ರೀ ಸೇನೇಶ್ವರ ದೇವಾಲಯದಿಂದ ಕಾಲೇಜಿನ ತನಕ ನಡೆದ ಕಲಾತಂಡಗಳ ಮೆರವಣಿಗೆಗೆ ಬೈಂದೂರು ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಪದ್ಮನಾಭ ಪಿ ಚಾಲನೆ ನೀಡಿದರು. ಬಳಿಕ ರಂಗಮಂದಿರದಲ್ಲಿ ವಿವಿಧ ಜಿಲ್ಲೆಗಳ 10 ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.