Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಶಾರದೋತ್ಸವ ಪುರಮೆರವಣಿಗೆ

ಗಂಗೊಳ್ಳಿ: ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಶ್ರೀ ಶಾರದಾ ಮಹೋತ್ಸವದ ೪೧ನೇ ವರ್ಷದ ಶ್ರೀ ಶಾರದಾ ದೇವಿಯ ಜಲಸ್ತಂಭನದ ಪುರಮೆರವಣಿಗೆ ವಿಜೃಂಭಣೆಯಿಂದ ಜರಗಿತು.

ಶ್ರೀ ಶಾರದಾ ಮಂಟಪದಿಂದ ಹೊರಟ ಪುರಮೆರವಣಿಗೆಯು ಮೇಲ್‌ಗಂಗೊಳ್ಳಿಯ ಬಾವಿಕಟ್ಟೆ ತನಕ ಸಾಗಿ ಪುನ: ಮುಖ್ಯರಸ್ತೆ ಮುಖಾಂತರ ಗಂಗೊಳ್ಳಿ ಬಂದರಿನ ಪೋರ್ಟ್ ಆಫೀಸಿನ ತನಕ ಸಾಗಿ ಪಂಚಗಂಗಾವಳಿ ನದಿಯಲ್ಲಿ ಶ್ರೀ ಶಾರದಾ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು. ಚಂಡೆ ವಾದನ, ನಾಸಿಕ್ ಬ್ಯಾಂಡ್, ಸುಮಾರು ಏಳು ಸ್ತಬ್ಧ ಚಿತ್ರಗಳು, ಹುಲಿವೇಷ, ಛದ್ಮವೇಷಗಳು ಪುರಮೆವಣಿಗೆಯ ಮೆರಗು ಹೆಚ್ಚಿಸಿದವು. ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ಪುರೋಹಿತರಾದ ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ, ಸಮಿತಿಯ ಅಧ್ಯಕ್ಷ ಸತೀಶ ಜಿ., ಪ್ರಧಾನ ಕಾರ್ಯದರ್ಶಿ ಶ್ರೀಧರ ಸಕ್ಲಾತಿ, ಕಾರ್ಯದರ್ಶಿ ಗೋಪಾಲ ಚಂದನ್, ಕೋಶಾಧಿಕಾರಿ ನಾಗೇಂದ್ರ ಪಿ.ಪೈ, ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ರೇಣುಕಾ ವಾಸುದೇವ ಶೇರುಗಾರ್, ಅನಿತಾ ಶೇಟ್, ರೇಷ್ಮಾ ವಿ.ನಾಯಕ್, ಪ್ರೇಮಾ ಸಿ.ಎಸ್.ಪೂಜಾರಿ ಹಾಗೂ ಸಮಿತಿಯ ಮತ್ತು ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ಸುದರ್ಶನ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕರ ಸುಬ್ಬಣ್ಣ ಹಾಗೂ ವಿವಿಧ ಠಾಣೆಗಳ ಉಪನಿರೀಕ್ಷಕರು ಬಿಗು ಪೊಲೀಸ್ ಬಂದೋಬಸ್ತ್ ನಡೆಸಿದ್ದರು.

Exit mobile version