Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತ; ಹೋರಾಟದ ಎಚ್ಚರಿಕೆ

ಗಂಗೊಳ್ಳಿ: ಕಳೆದ ಕೆಲವು ದಿನಗಳಿಂದ ಗಂಗೊಳ್ಳಿ-ಕುಂದಾಪುರ ನಡುವೆ ಸಂಚರಿಸುತ್ತಿರುವ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ ಒಂದು ಬಸ್‌ನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಇದೇ ರೀತಿ ಮುಂದುವರಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಕಳೆದ ಹಲವು ದಶಕಗಳ ಹೋರಾಟದ ಫಲವಾಗಿ ಮಂಜೂರಾಗಿರುವ ಎರಡು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಜನರಿಗೆ ಹೆಚ್ಚು ಅನುಕೂಲಕರವಾಗಿದೆ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಕುಂದಾಪುರ ಡಿಪೋದ ಅಧಿಕಾರಿಗಳು ಕುಂಟು ನೆಪವೊಡ್ಡಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುತ್ತಿದ್ದಾರೆ. ಕಳೆದ ಸುಮಾರು ಎರಡು ತಿಂಗಳಿನಿಂದ ಪ್ರತಿ ಆದಿತ್ಯವಾರ ಒಂದು ಬಸ್ ಮಾತ್ರ ಸಂಚರಿಸುತ್ತಿದೆ. ಹೀಗಾಗಿ ನಾಗರಿಕರು ಮತ್ತೊಮ್ಮೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ನಾಗರಿಕರ ಹೋರಾಟ ಸಮಿತಿ ತಿಳಿಸಿದೆ.

ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಬಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರ ಅನುಕೂಲಕ್ಕಾಗಿ ಸಂಚರಿಸುತ್ತಿರುವ ಸರಕಾರಿ ಬಸ್‌ಗಳ ಸಂಚಾರವನ್ನು ಮೊಟಕುಗೊಳಿಸಿ ಸಂಚಾರವನ್ನೇ ರದ್ದು ಮಾಡುವ ಹುನ್ನಾರ ನಡೆಯುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಖಾಸಗಿ ಬಸ್ ಲಾಭಿಗೆ ಸ್ಥಳೀಯ ಡಿಪೋ ಅಧಿಕಾರಿಗಳು ಮಣಿದು ಪ್ರತಿನಿತ್ಯವೆಂಬಂತೆ ಸರಕಾರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಅಧಿಕಾರಿಗಳು ತಮ್ಮ ಹಿಂದಿನ ಚಾಳಿಯನ್ನು ಮುಂದುವರಿಸಿದರೆ ಮತ್ತು ಗಂಗೊಳ್ಳಿ-ಕುಂದಾಪುರ ನಡುವಿನ ಸರಕಾರಿ ಬಸ್ ಸಂಚಾರವನ್ನು ಮೊಟಕುಗೊಳಿಸಿದರೆ, ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗುವುದು ಮತ್ತು ಕುಂದಾಪುರ ಡಿಪೋ ಎದುರು ಧರಣಿ ನಡೆಸಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಚ್.ಚಿಕ್ಕಯ್ಯ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version