ಬೈಂದೂರು: ಜೀವನಾನುಭವವೆಂಬುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನವಾಗಿರುತ್ತದೆ. ಏನಾದರೂ ವಿಶೇಷವಾದುದನ್ನು ಸಾಧಿಸಬೇಕೆಂಬ ಛಲ ಇದ್ದಾಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ಎಲೆಮರೆಯ ಕಾಯಿಗಳಂತೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವ ಹಿರಿಯರನ್ನು ಗೌರವಿಸಿ, ಅವರ ತತ್ವ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯಲ್ಲಿ ನಾಡದ ಕೊರಗರ ಕಾಲೋನಿಯ ಕೊರಗ ಸಮುದಾಯ ಭವನದಲ್ಲಿ ನಡೆದ ’ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಬೈಂದೂರು ಹೋಬಳಿ ಘಟಕದ ಅಧ್ಯಕ್ಷ ಡಾ. ಎನ್. ಸುಬ್ರಹ್ಮಣ್ಯ ಭಟ್ ಮಾತನಾಡಿ, ಆಧುನಿಕತೆಯ ಗುಂಗಿನಲ್ಲಿ ನಮ್ಮತನವನ್ನು ಕಳೆದುಕೊಳ್ಳುವ ಆತಂಕದ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ನಮ್ಮ ಸಂಪ್ರದಾಯ, ಸಂಸ್ಕಾರಗಳು ಜೀವಂತವಾಗಿರುವುದು ಸಂತಸದ ವಿಚಾರ. ಸಾಧಕರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಅವರ ವಿಚಾರಧಾರೆ ಹಾಗೂ ಸಾಧನೆಯನ್ನು ದಾಖಲಿಸಬೇಕಾಗಿದೆ. ಇಂತಹ ಪ್ರಯತ್ನಗಳಿಂದ ಕನ್ನಡ ನಾಡು ನುಡಿಯನ್ನು ಸಂರಕ್ಷಿಸಿದಂತಾಗುತ್ತದೆ. ಮಾನವರೆಲ್ಲರೂ ಒಂದೇ ಎಂಬಂತಹ ಸರ್ವಸಮಾನತೆಯ ತಳಹದಿಯಲ್ಲಿ ನಾವೆಲ್ಲ ಮುಂದಡಿ ಇಟ್ಟಾಗ ಬಾಳು ಹಸನಾಗುತ್ತದೆ ಎಂದರು.
ಸ್ಥಳೀಯ ಹಿರಿಯ ಕೃಷಿಕ ತಿಮೋತಿ ಡಿ’ಸೋಜಾ ಹಾಗೂ ಪೌರಕಾರ್ಮಿಕರಾಗಿ ನಿವೃತ್ತಿ ಹೊಂದಿದ ಸಿದ್ದು ರಾಮನಗರ ಇವರುಗಳನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕೊರಗ ಸಂಘದ ಅಧ್ಯಕ್ಷೆ ಕುಸುಮಾ, ಕಸಾಪ ಸದಸ್ಯ ನರಸಿಂಹ ಬಿ. ನಾಯಕ್ ಉಪಸ್ಥಿತರಿದ್ದರು. ಪ್ರಕಾಶ್ ಹೆಬ್ಬಾರ್ ವಂದಿಸಿದರು.