Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದ ಆತಿಥ್ಯೋದ್ಯಮಕ್ಕೆ ಕೊಡುಗೆ: ಜ.28ರಂದು ‘ಯುವ ಮನೀಷ್’ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ಮತ್ತು ಬೈಂದೂರು ತಾಲೂಕಿನ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದನ್ನು ಮನಗಂಡು ಕುಂದಾಪುರದ ಹೃದಯ ಭಾಗದಲ್ಲಿ ಉತ್ಕೃಷ್ಟ ಗುಣಮಟ್ಟದ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮುಂದಾಗಿದ್ದೇವೆ ಎಂದು ಸಂಸ್ಥೆಯ ಪಾಲುದಾರರಾದ ಬಿ. ಉದಯಕುಮಾರ್ ಶೆಟ್ಟಿ ಹೇಳಿದರು.

ಅವರು ಶುಕ್ರವಾರ ಹೋಟೆಲ್ ಯುವ ಮನೀಶ್‌ನಲ್ಲಿ ನಡೆದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಇಲ್ಲಿ ವಿಫುಲ ಅವಕಾಶಗಳಿದ್ದು ಇಲ್ಲಿನ ಪ್ರಕೃತಿ ಸೌಂದರ್ಯ ದೇಶ-ವಿದೇಶಿಗರ ಆಕರ್ಷಣೆಗೆ ಒಳಗಾಗಿದೆ. ಧಾರ್ಮಿಕ ಕೇಂದ್ರಗಳಿಗೂ ಬರುವ ಭಕ್ತರ ಸಂಖ್ಯೆಯೂ ಹೆಚ್ಚು. ಮರವಂತೆ, ಸೋಮೇಶ್ವರ, ಕೋಡಿ ಕಡಲ ಕಿನಾರೆ ಜನಜನಿತವಾಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಹೋಟೆಲ್, ಆಹಾರ ಮೊದಲಾದ ಸೌಕರ್ಯಗಳು ವ್ಯವಸ್ಥಿತವಾಗಿ ಉತ್ತಮ ಸೂರಿನಡಿಯಲ್ಲಿ ದೊರಕಬೇಕು ಎಂಬ ಆಶಯ ಹೊಂದಿದ್ದೇವೆ ಎಂದರು.

ಪಾಲುದಾರಿಕೆಯಲ್ಲಿ ಆತಿಥ್ಯೋದ್ಯಮ:
ಈಗಾಗಾಲೇ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಾ ಬಂದಿರುವ ಪ್ರತಿಷ್ಠಿತ ಜೆ.ಎನ್.ಎಸ್. ಕಂಪೆನಿಯ ಆಡಳಿತ ಮುಖ್ಯಸ್ಥರಾದ ಜಯಶೀಲ ಎನ್. ಶೆಟ್ಟಿ ಮತ್ತು ಮನೀಶ್ ಜೆ. ಶೆಟ್ಟಿ ಹಾಗೂ ಪ್ರತಿಷ್ಠಿತ ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಆಡಳಿತ ಮುಖ್ಯಸ್ಥರಾದ ಬೈಲೂರು ಉದಯ್ ಕುಮಾರ್ ಶೆಟ್ಟಿ ಮತ್ತು ಬೈಲೂರು ವಿನಯ್ ಕುಮಾರ್ ಶೆಟ್ಟಿಯವರ ಪಾಲುದಾರಿಕೆಯಲ್ಲಿ ಕುಂದಾಪುರ ಗಾಂಧೀ ಮೈದಾನದ ಎದುರು (ಶಾಸ್ತ್ರೀ ಸರ್ಕಲ್ ಬಳಿ) ‘ಯುವ ಮನೀಶ್’ ಹೆಸರಿನ ಸುಸಜ್ಜಿತವಾದ ಬ್ಯುಸಿನೆಸ್ ಹೋಟೆಲ್ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.

‘ಯುವ ಮನೀಶ್’ ಬ್ಯುಸಿನೆಸ್ ಹೋಟೆಲ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು ಸೆಂಟ್ರಲ್ ಏರ್ ಕಂಡೀಶನ್ ವ್ಯವಸ್ಥೆ ಹೊಂದಿದೆ. ಸುಮಾರು 100 ಜನರು ಕುಳಿತುಕೊಳ್ಳಬಹುದಾದ ‘ಲಷಿಕಾ’ ವೆಜ್ ರೆಸ್ಟೋರೆಂಟ್, ‘ಸೀ ರಾಕ್’ ಬಾರ್& ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ರೂಫ್ ಟಾಪ್ ರೆಸ್ಟೋರೆಂಟ್ ಹೊಂದಿರುತ್ತದೆ. ದೂರದ ನಗರಗಳಿಂದ ಆಗಮಿಸುವ ಗ್ರಾಹಕರಿಗೆ ಉತ್ತಮ ಸೇವೆಯ ಜೊತೆಗೆ ಗುಣಮಟ್ಟದ ಆಹಾರ ನೀಡಲು ಸಂಸ್ಥೆ ಬದ್ಧವಾಗಿದೆ.

ಈ ಹೋಟೆಲ್ನಲ್ಲಿ 54 ಸುಸಜ್ಜಿತ ರೂಮ್ಗಳಿದ್ದು ಅದರಲ್ಲಿ 2 ಕ್ಲಬ್ ಸ್ಯೂಟ್ ರೂಮ್, 22 ಎಕ್ಸಿಕ್ಯೂಟಿವ್ ಟ್ವಿನ್, 30 ಎಕ್ಸಿಕ್ಯೂಟಿವ್ ಕಿಂಗ್ ರೂಂ ಸೌಕರ್ಯ ಹೊಂದಿದ್ದು ಗ್ರಾಹಕರ ಸೇವೆಗೆ ಸಿದ್ದಗೊಂಡಿದೆ.

ವಿಶಾಲ ಪಾರ್ಕಿಂಗ್ ವ್ಯವಸ್ಥೆ
ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಬಳಿಯಲ್ಲಿ ಹೋಟೆಲ್ ಇದ್ದು ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ನೆಲಮಾಳಿಗೆಯಲ್ಲಿ ಮತ್ತೆ ಓಪನ್ ಪಾರ್ಕಿಂಗ್ ಮಾಡಲು ಸೂಕ್ತ ಅವಕಾಶವಿದೆ.

ಉದ್ಘಾಟನೆ:
‘ಯುವ ಮನೀಷ್’ ಬ್ಯುಸಿನೆಸ್ ಹೋಟೆಲ್ ಉದ್ಘಾಟನಾ ಕಾರ್ಯಕ್ರಮ ಜನವರಿ 28 ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠ, ಘಟಪ್ರಭಾ ಇಲ್ಲಿನ ಮ.ನಿ.ಪ್ರ. ಡಾ| ಮಲ್ಲಿಕಾರ್ಜುನ ಸ್ವಾಮೀಜಿಯವರು ಆಶೀರ್ವಚನಗೈಯಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಅಂಗವಿಕಲ, ಹಿರಿಯ ನಾಗರಿಕ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರಕಾರದ ಕಾನೂನು ಸಂಸದೀಯ ಮತ್ತು ಪ್ರವಾಸೋಧ್ಯಮ ಸಚಿವರಾದ ಎಚ್.ಕೆ. ಪಾಟೀಲ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಆಗಮಿಸಲಿದ್ದು, ಗೌರವ ಅತಿಥಿಗಳಾಗಿ ವಿಧಾನಪರಿಷತ್ ಮಾಜಿ ಸಭಾಪತಿಗಳಾದ ಪ್ರತಾಪಚಂದ್ರ ಶೆಟ್ಟಿ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ. ಶ್ರೀನಿವಾಸ್, ಕುಂದಾಪುರ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ. ಸುಕುಮಾರ ಶೆಟ್ಟಿ, ಕೆ. ಗೋಪಾಲ ಪೂಜಾರಿ, ಪಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ದುಬೈನ ಸಿಎಂಡಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ವಿಶ್ವವಾಣಿ ದಿನಪತ್ರಿಕೆ ಮುಖ್ಯ ಸಂಪಾದಕರಾದ ವಿಶ್ವೇಶ್ವರ ಭಟ್, ರೆಡಿಸ್ಸನ್ ಬ್ಲೂ ಆರ್ಟಿಯಾ ನಿರ್ದೇಶಕರಾದ ಕೆ. ನಾಗರಾಜ್, ರಾಜಕೀಯ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಬಿ. ವಿನಯ ಕುಮಾರ್ ಶೆಟ್ಟಿ, ಜಯಶೀಲ್ ಎನ್. ಶೆಟ್ಟಿ, ಮನೀಶ್ ಜೆ. ಶೆಟ್ಟಿ ಉಪಸ್ಥಿತರಿದ್ದರು.

Exit mobile version