Kundapra.com ಕುಂದಾಪ್ರ ಡಾಟ್ ಕಾಂ

ಜಮೀಯ್ಯತುಲ್ ಫಲಾಹ್ ಬೈಂದೂರು ಘಟಕ: ’ನಮ್ಮೂರ ಮಸೀದಿ ನೋಡಬನ್ನಿʼ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಮಾನವ ಧರ್ಮ ಎಲ್ಲಕ್ಕಿಂತಲೂ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರೂ ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದ್ವೇಷ ಭಾವನೆ ದೂರೀಕರಿಸಿ ಬದುಕಿರುವಷ್ಟು ದಿನ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಭಾವೈಕ್ಯತೆಯಿಂದ ಬಾಳುವಂತಾಗಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಹೇಳಿದರು.

ಇಲ್ಲಿನ ನಾಕಟ್ಟೆ ಮಸೀದಿ ಆವರಣದಲ್ಲಿ ಜಮೀಯ್ಯತುಲ್ ಫಲಾಹ್ ಬೈಂದೂರು ಘಟಕ ಆಯೋಜಿಸಿದ ಖದೀಜತುಲ್ ಕುಬ್ರಾ ಮಸೀದಿ ಸಹಯೋಗದಲ್ಲಿ ನಡೆದ ’ನಮ್ಮೂರ ಮಸೀದಿ ನೋಡಬನ್ನಿ’ ಎಂಬ ವಿನೂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೇದ ಓದಿದರೆ ಸಾಲದು ವೇದನೆ ಅರಿಯಬೇಕು. ಅಪನಂಬಿಕೆ, ತಪ್ಪು ಮಾಹಿತಿ ಹಾಗೂ ಅವಿಶ್ವಾಸದಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಬದುಕು ತುಂಬಾ ಚಿಕ್ಕದಾಗಿದ್ದು, ನಾವೆಲ್ಲರೂ ಭಾರತೀಯರು ಎಂಬ ನೆಲೆಯಲ್ಲಿ ಪರಸ್ಪರ ಪ್ರೀತಿ, ನಂಬಿಕೆ, ಸಾಮರಸ್ಯ ಹಾಗೂ ಸಹೋರತ್ವದಿಂದ ನಮ್ಮ ಭಾರತ ದೇಶದಲ್ಲಿ ಸಹಬಾಳ್ವೆ ನಡೆಸುವಂತಾಗಬೇಕು. ಒಂದೊಂದು ಧರ್ಮದಲ್ಲಿ ಒಂದೊಂದು ಆಚರಣೆ, ಸಂಪ್ರದಾಯವಿದ್ದು, ಅನ್ಯ ಧರ್ಮಕ್ಕೂ ನಾವು ಗೌರವಿಸುವ ಭಾವನೆ ನಮ್ಮಲ್ಲಿರಬೇಕು. ಮಂದಿರ, ಮಸೀದಿ, ಚರ್ಚ್ಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮ ವಿಭಿನ್ನವಾಗಿದ್ದರೂ ದೇವರ ಒಬ್ಬನೇ ಎಂಬಂತೆ ಪ್ರತಿಯೊಬ್ಬರೂ ಕೂಡ ಧಾರ್ಮಿಕ ಕೇಂದ್ರಗಳ ಬಗ್ಗೆ ತಿಳಿಯಬೇಕು ಎಂಬ ಕಾರಣಕ್ಕಾಗಿ ಮುಸ್ಲಿಂ ಸಮಾಜ ಆಯೋಜಿಸಿದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.

ಕರ್ನಾಟಕ ಬ್ಲಡ್ ಹೆಲ್ಫ್ ಕೇರ್ ಕಾರ್ಯದರ್ಶಿ ಶಂಶುದ್ಧೀನ್ ಬಳ್ಕುಂಜೆ ಮಾತನಾಡಿ ವಿವಿಧತೆಯಲ್ಲಿ ಏಕತೆ ಸಾರುವ ದೇಶದ ಪ್ರಜೆಗಳಾಗಿ ನಾಲೆಲ್ಲರೂ ಧರ್ಮ, ಜಾತಿ ಭೇಧ ಮರೆತು ಈ ಮಣ್ಣಿನ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳನ್ನು ಗೌರವಿಸಬೇಕಾಗಿದೆ. ಅಪನಂಬಿಕೆಗಳು ಮುಕ್ತವಾದಾಗ ದೇಶದ ಶಕ್ತಿ ಬಲವರ್ಧನೆಗೊಳ್ಳುತ್ತದೆ ಎಂದು ಅಂಬೇಡ್ಕರರು ಸಂವಿಧಾನದ ಪೀಠಿಕೆಯಲ್ಲಿ ಹೇಳಿದ್ದಾರೆ ಎಂದರು.

ಸಾದಾ ಅಬೂಬಕರ್ ಬಾಷಾ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಹೋಲಿಕ್ರಾಸ ಚರ್ಚ್ ಧರ್ಮಗುರು ರೆ. ಫಾ.ವಿನ್ಸೆಂಟ್ ಕೊಹೆಲ್ಹೊ, ಉದ್ಯಮಿ ನಾಗೂರು ಅಬ್ದುಸ್ಸಮದ್ ಸಾಹೇಬ್ ಇದ್ದರು. ಹುಸೈನ್ ಸಾಹೇಬ್ ಸ್ವಾಗತಿಸಿ, ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮುಹಮ್ಮದ್ ಇದ್ರೀಸ್ ಹೂಡೆ ಪ್ರಾಸ್ತಾವಿಸಿದರು. ಜಮೀಯ್ಯತುಲ್ ಫಲಾಹ್ ಘಟಕದ ಅಧ್ಯಕ್ಷ ಶೇಖ್ ಫಯಾಜ್ ಅಲಿ ವಂದಿಸಿದರು. ಬ್ಲಡ್ ಹೆಲ್ಫ್ ಕೇರ್ ಕರ್ನಾಟಕ ಇದರ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು. ನಂತರ ಸೇರಿದ ಕ್ರೈಸ್ತ ಮತ್ತು ಹಿಂದು ಧರ್ಮಗಳ ನೂರಾರು ಪುರುಷ, ಮಹಿಳೆಯರಿಗೆ ಮಸೀದಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.

Exit mobile version