Kundapra.com ಕುಂದಾಪ್ರ ಡಾಟ್ ಕಾಂ

ಮಾ.5ರಂದು ಬಿಜೂರು ಸ.ಹಿ.ಪ್ರಾ. ಶಾಲೆ ದತ್ತು ಸ್ವೀಕಾರ: ಡಾ. ಗೋವಿಂದ ಬಾಬು ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು, ದತ್ತು ಸ್ವೀಕಾರ ಸಮಾರಂಭ ಮಾ.5ರ ಸಂಜೆ ಗಂಟೆ 6ಕ್ಕೆ ಶಾಲಾ ಆವರಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಜರುಗಲಿದೆ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ ಅವರು ಹೇಳಿದರು.

ಅವರು ಬೈಂದೂರು ಪ್ರೆಸ್‌ಕ್ಲ್‌ಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಾನು ಕಲಿತ ಸರಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಊರಿನವರ ಜೊತೆಗೂಡಿ ಮಾದರಿ ಶಾಲೆಯನ್ನಾಗಿ ರೂಪಿಸುವ ಉದ್ದೇಶ ಹೊಂದಿದ್ದು, ಇದಕ್ಕೆ ಶಾಲಾ ಎಸ್‌ಡಿಎಂಸಿ ಹಾಗೂ ಶಿಕ್ಷಕರೂ ಸಹಕಾರ ನೀಡುತ್ತಿದ್ದಾರೆ ಎಂದರು.

ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ, ಮೂಲ ಸೌಕರ್ಯ ಒಳಗೊಂಡಂತೆ ಗುಣಮಟ್ಟದ ಶಿಕ್ಷಣ ನೀಡಲು ಚಿಂತನೆ ನಡೆಸಲಾಗಿದೆ. ಪ್ರಾರಂಭದಲ್ಲಿ ಹೊಸ ವಾಹನ ಖರೀದಿ, ಹೊಸ ಅತಿಥಿ ಶಿಕ್ಷಕರ ನೇಮಕಾತಿ ಮಾಡುವುದು, ಎಲ್ ಕೆಜಿ, ಯುಕೆಜಿ ತರಗತಿ ಆರಂಭಿಸುವುದು, ಕಂಪ್ಯೂಟರ್ ಶಿಕ್ಷಣ ನೀಡುವುದು, ಮಕ್ಕಳಿಗೆ ಸಂಗೀತ, ಭರತ ನಾಟ್ಯ, ಯಕ್ಷಗಾನ, ನಾಟಕ, ಡ್ರಾಯಿಂಗ್ ಕಲಿಕೆಗೆ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿಗಳ ನೆನಪಿನ ಶಕ್ತಿ ಹೆಚ್ಚಿಸಲು ಏಕಾಗ್ರತೆಗಾಗಿ ಧ್ಯಾನ, ಆರೋಗ್ಯಕ್ಕಾಗಿ ಯೋಗ ತರಬೇತಿ ನೀಡುವುದು, ಅಧ್ಯಾಯನ ಕೇಂದ್ರ(ಲೈಬ್ರರಿ), ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಸೇರಿದಂತೆ ಶಾಲೆಗೆ ಸರಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಯತ್ನಿಸುವುದು, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ, ಶಿಕ್ಷಕರಿಗೆ ಸೂಕ್ತ ತರಬೇತುದಾರರಿಂದ ಮಾರ್ಗದರ್ಶನ ನೀಡುವುದು ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ, ಕೌಶಲ್ಯಯುತ, ಮೌಲ್ಯ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಉತ್ತಮ ಚಿಂತನೆ ನಡೆಸಿ ಯೋಜನೆ ರೂಪಿಸಲಾಗಿದೆ ಎಂದರು.

ಮಾ.5ರಂದು ಸಂಜೆ ಗಂಟೆ 6ಕ್ಕೆ ದತ್ತು ಸ್ವೀಕಾರ ಸಮಾರಂಭವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಬಿ.ವೈ ರಾಘವೇಂದ್ರ, ಅವಧೂತ ವಿನಯ ಗುರೂಜಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಬಿಎಂ ಸುಕುಮಾರ ಶೆಟ್ಟಿ, ಉದ್ಯಮಿ ಕೃಷ್ಣಮೂರ್ತಿ ಮಂಜ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಿವದೂತ ಗುಳಿಗ ನಾಟಕ ಪ್ರದರ್ಶನ ಇರಲಿದೆ.

10 ವರ್ಷಗಳಿಂದ ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾಕ್ಷೇತ್ರಗಳಿಗೆ ತನ್ನದೇ ಆದ ಸಹಾಯ – ಸಹಕಾರ ನೀಡುತ್ತಿದ್ದು, ಸಮಾಜದ ಬಡ ಅರ್ಹ ವಿದ್ಯಾರ್ಥಿಗಳು, ನಿರಾಶ್ರಿತರು, ವೃದ್ಧರು, ವಿಕಲಚೇತನರ ಕಷ್ಟಗಳಿಗೆ ಆರ್ಥಿಕ ಸಹಕಾರವನ್ನು ನೀಡಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಶಿಕ್ಷಕ ಮಂಜುನಾಥ ಬಿಜೂರು, ಹಳೆ ವಿದ್ಯಾರ್ಥಿಗಳಾದ ಶ್ರೀಧರ ಬಿಜೂರು, ತಿಮ್ಮಪ್ಪ ಬಿಜೂರು, ಟ್ರಸ್ಟ್‌ನ ನಾಗರಾಜ ಪಿ. ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು.

Exit mobile version