Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಜಿಲ್ಲಾ ಮಟ್ಟದ ದೇಸಿ ಜಗಲಿ ಕಥಾ ಕಮ್ಮಟ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸೃಜಶೀಲತೆಯನ್ನು ಸೃಷ್ಟಿಸುವ ಕಥೆ ಬರೆಯುವುದು ಭಾವನೆಗಳನ್ನು ಅಭಿವ್ಯಕ್ತಿಸುವ ಉತ್ತಮ ವೇದಿಕೆ. ಕಥೆ ಓದುವುದು ಕಲ್ಪನಾ ಲೋಕದಲ್ಲಿ ವಿಹರಿಸುವ ಅನುಭವ ನೀಡುತ್ತದೆ. ಕಥೆ ರಚನೆಗೆ ವಸ್ತುಗಳ ಕೊರತೆ ಇಲ್ಲ, ಓದುವ ಹವ್ಯಾಸ, ಬರೆಯುವ ಆಸಕ್ತಿ, ಸೃಜನಶೀಲ ಮನಸು ಉತ್ತಮ ಕಥೆಗಾರರನ್ನಾಗಿ ರೂಪಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರು, ಲೇಖಕರು ಆಗಿರುವ ಡಾ. ಉಮೇಶ ಪುತ್ರನ್ ಹೇಳಿದರು.

ಜನಪ್ರತಿನಿಧಿ ಪ್ರಕಾಶನ ಕುಂದಾಪುರ ಮತ್ತು ವೀರಲೋಕ ಪ್ರಕಾಶನ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ಕಾಲೇಜು ರಸ್ತೆಯ ರೋಟರಿ ಕುಂದಾಪುರ ಮಿಡ್‌ಟೌನ್ ಸಭಾಂಗಣದಲ್ಲಿ ನಡೆಯಲಿರುವ ಎರಡು ದಿನಗಳ ’ದೇಸಿ ಜಗಲಿ ಕಥಾ ಕಮ್ಮಟ’ವನ್ನು ಮಾಸ್ತಿಯವರ ಕಥೆ ಓದುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ಮೆದುಳಿನ ಎಡಭಾಗ ವಿಶ್ಲೇಷಣೆಗೆ ಒತ್ತು ನೀಡುತ್ತದೆ. ಮೆದುಳಿನ ಬಲಭಾಗ ಸೃಜನಶೀಲತೆ, ಭಾವನೆ, ಕಲ್ಪನೆಗಳ ಹುಟ್ಟು ಹಾಕುತ್ತದೆ. ಭಾವನೆಗಳಿಗೆ ಅರ್ಥ ಕಲ್ಪಿಸಲು ಸಹಕರಿಸುತ್ತದೆ. ಹೊಸ ಹೊಸ ಚಿಂತನೆ, ಆಲೋಚನೆಗಳು ಕಥೆಗಳ ಹುಟ್ಟಿಗೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯ ಸದುಪಯೋಗ ಆಗಬೇಕು ಎಂದರು.

ಇಂಥಹ ಕಥಾ ಕಮ್ಮಟಗಳು ದೊಡ್ಡ ದೊಡ್ಡ ಕಥೆಗಾರರನ್ನು ಬೆಳೆಸಲು ವೇದಿಕೆಯಾಗಲಿದೆ. ಆಧುನಿಕ ಜಗತ್ತಿನಲ್ಲಿ ಮೊಬೈಲ್‌ಗಾಗಿ ಹೆಚ್ಚು ಸಮಯವನ್ನು ಮೀಸಲಾಗಿಡುವ ಪರಿಪಾಠ ಬೆಳೆದಿದೆ. ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳ ಬಗ್ಗೆ ಹೆಚ್ಚು ಸಮಯ ಮೀಸಲಿಡುವುದರಿಂದ ಹೆಚ್ಚು ಪ್ರಯೋಜನವಿದೆ ಎಂದರು.

ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷರಾದ ಸದಾಶಿವ ರಾವ್ ಅರೆಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೀಯ ಮಾತುಗಳನ್ನಾಡಿದ ಅವರು ಬರೆಯುವಿಕೆಯ ಹಿಂದೆ ಓದುವಿಕೆ ಇರುತ್ತದೆ. ಓದಿದ ಬಳಿಕ ಕಥೆ ಕಟ್ಟುವ ಪ್ರಯತ್ನ ಮಾಡಬೇಕು. ಪ್ರಸ್ತುತ ಓದುವ ಆಸಕ್ತಿ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳತ್ತ ಹೆಚ್ಚು ಸಮಯ ವಿನಿಯೋಗಿಸುವುದನ್ನು ಬಿಟ್ಟು ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳ ಬಗ್ಗೆ ಆಸಕ್ತಿ ವಹಿಸಬೇಕಾಗಿದೆ. ಓದುವ ವಿಚಾರದಲ್ಲಿಯೇ ಕಮ್ಮಟಗಳನ್ನು ಮಾಡುವ ಅನಿವಾರ್ಯತೆಯೂ ಸದ್ಯಕ್ಕಿದೆ. ಆ ನಿಟ್ಟಿನಲ್ಲಿ ಅರೆಹೊಳೆ ಪ್ರತಿಷ್ಠಾನವೂ ಕಾರ್ಯೋನ್ಮುಖವಾಗಲಿದೆ ಎಂದರು.

ನಿವೃತ್ತ ಪ್ರಾಂಶುಪಾಲರು ಹಾಗೂ ಜಾನಪದ ವಿದ್ವಾಂಸರು ಆಗಿರುವ ಡಾ.ಗಣನಾಥ ಎಕ್ಕಾರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಜನಪ್ರತಿನಿಧಿ ಪತ್ರಿಕೆಯ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಲ್ಲಿ ಸಾಹಿತ್ಯ ಒಲವು ಹೆಚ್ಚಿಸುವ ನಿಟ್ಟಿನಲ್ಲಿ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಾಗರಾಜ ವಂಡ್ಸೆ ಸ್ವಾಗತಿಸಿದರು. ಸುಮನಾ ಪಡುಕೋಣೆ, ರೂಪೇಶ್ ಗಂಗೊಳ್ಳಿ, ಸುರಕ್ಷಾ ಉಡುಪ ಅತಿಥಿಗಳನ್ನು ಪರಿಚಯಿಸಿದರು. ಶ್ರೀರಾಜ್ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಸುಮನಾ ಪಡುಕೋಣೆ ವಂದಿಸಿದರು. ಕೃಷ್ಣ, ರಕ್ಷಿತ್ ಕೋಟೇಶ್ವರ, ಗಣೇಶ್ ಬಳ್ಕೂರು ಕಾರ್ಯಕ್ರಮಕ್ಕೆ ಸಹಕರಿಸಿದರು.

ಕಥಾ ಕಮ್ಮಟದಲ್ಲಿ ಮೊದಲ ಭಾಗದಲ್ಲಿ ಡಾ. ಗಣನಾಥ್ ಎಕ್ಕಾರು ಅವರು ನಮ್ಮೊಡನೆ ಕಥೆಗಳು, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು-’ಕಥೆಯಲ್ಲಿ ಪಾತ್ರ ಸಂಯೋಜನೆ’, ಡಾ.ಪಾರ್ವತಿ ಜಿ. ಐತಾಳ್- ’ಭಾಷಾಂತರ ಮತ್ತು ಕಥೆ’, ಡಾ. ರೇಖಾ ಬನ್ನಾಡಿ -’ಚರ್ಚೆ, ಸಂವಹನ, ಪರಾಮರ್ಶನ’ ವಿಷಯದ ಕುರಿತು ವಿಷಯ ವಿಶ್ಲೇಷಣೆ ಮಾಡಿದರು.

ಕಥಾ ಕಮ್ಮಟದಲ್ಲಿ ಉಡುಪಿ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Exit mobile version