Site icon Kundapra.com ಕುಂದಾಪ್ರ ಡಾಟ್ ಕಾಂ

ಮಹಿಳೆಯರ ಸ್ವಾವಲಂಬಿ ಬದುಕಿಗೆ ಸರಕಾರದ ಅನುದಾನ: ಶಾಸಕ ಗುರುರಾಜ್ ಗಂಟಿಹೊಳೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಸಂಜೀವಿನಿ ಸಂಘದ ಮೂಲಕ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಸರಕಾರ ವಿವಿಧ ಯೋಜನೆಗಳ ಮೂಲಕ ಅನುದಾನ ಒದಗಿಸುತ್ತಿದೆ. ಊರಿನಲ್ಲಿದ್ದು ದುಡಿಮೆ ಮಾಡಲು ಸಂಜೀವಿನಿ ಸಂಘಗಳ ಸಹಕಾರಿಯಾಗುತ್ತದೆ. ಸಂಜೀವಿನಿ ಸಂಘದ ಸದಸ್ಯರು ವ್ಯವಹಾರ ಬಗ್ಗೆ ತರಬೇತಿ ಪಡೆದುಕೊಂಡು ವ್ಯವಹಾರದಲ್ಲಿ ಯಶಸ್ಸು ಗಳಿಸಲು ಪ್ರಯತ್ನಿಸಬೇಕು. ಸಂಜೀವಿನಿ ಘಟಕ ಯಶಸ್ಸು ಗಳಿಸುವುದರ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ಇಲಾಖೆ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ ಹಾಗೂ ಗ್ರಾಮ ಪಂಚಾಯತ್ ಗುಜ್ಜಾಡಿ, ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವತಿಯಿಂದ ಕೊಡಪಾಡಿಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಶ್ರೀ ದುರ್ಗಾ ಸಂಜೀವಿನಿ ಚಿಕ್ಕಿ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಕುಂದಾಪುರ ತಾಪಂ ಮ್ಯಾನೇಜರ್ ರಾಮಚಂದ್ರ ಮೆಯ್ಯ, ಎನ್ಆರ್ಎಲ್ಎಂ ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಸಂಜೀವಿನಿ ಸಂಘದ ತಾಲೂಕು ಒಕ್ಕೂಟ ಅಧ್ಯಕ್ಷೆ ವಿಜಯಾ ಗಾಣಿಗ, ಕರ್ಣಾಟಕ ಬ್ಯಾಂಕ್ ತ್ರಾಸಿ ಶಾಖೆಯ ಅಸಿಸ್ಟೆಂಟ್ ಮ್ಯಾನೇಜರ್ ಅಪರ್ಣಾ, ಕೃಷಿ ಇಲಾಖೆಯ ಸಂಪನ್ಮೂಲ ವ್ಯಕ್ತಿ ಸೂರಜ್ ಶೆಟ್ಟಿ, ಎನ್ಆರ್ಎಲ್ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯತೀಶ್, ಎನ್ಆರ್ಎಲ್ಎಂ ತಾಲೂಕು ವ್ಯವಸ್ಥಾಪಕ ಪ್ರಶಾಂತ್, ಗುಜ್ಜಾಡಿ ಗ್ರಾಪಂ. ಸದಸ್ಯರಾದ ಹರೀಶ ಮೇಸ್ತ, ಜೆಸಿಂತಾ. ಲೋಲಾಕ್ಷಿ ಪಂಡಿತ್, ಥೈಲ್ಯಾಂಡ್ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪದಕ ವಿಜೇತ ದಿನೇಶ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ದುರ್ಗಾ ಸಂಜೀವಿನಿ ಚಿಕ್ಕಿ ಘಟಕದ ಮುಖ್ಯಸ್ಥೆ ಕವಿತಾ ಗಾಣಿಗ ಸ್ವಾಗತಿಸಿದರು. ಎಂಬಿಕೆ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version