Kundapra.com ಕುಂದಾಪ್ರ ಡಾಟ್ ಕಾಂ

‘ಕುಂದಾಪ್ರ ಕನ್ನಡ ಅಧ್ಯಯನ ಪೀಠ’ ಸ್ಥಾಪನೆ ಪ್ರಸ್ತಾವನೆಗೆ ಮತ್ತೆ ಜೀವಕಳೆ, ಅನುದಾನ ಮಂಜೂರು

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ
: ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭಕ್ಕೆ ಆಸ್ಥೆ ವಹಿಸಿ ಮಂಗಳೂರು ವಿಶ್ವವಿದ್ಯಾನಿಲಯವು ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ನಾಲ್ಕು ವರ್ಷಗಳ ಜೀವಕಳೆ ದೊರೆತಿದೆ. ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಟಿಪ್ಪಣಿಯಾಗಿದ್ದು, ಶೀಘ್ರವೇ ಅನುದಾನ ಬಿಡುಗಡೆಗೊಂಡು ಅಧ್ಯಯನ ಪೀಠ ಸ್ಥಾಪನೆಯ ಹಾದಿ ಸುಗಮವಾಗಲಿದೆ.

ನಾಲ್ಕು ವರ್ಷಗಳ ಹಿಂದೆ ಅಧ್ಯಯನ ಪೀಠ ಆರಂಭಿಸಲು ಮಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆರಂಭದಲ್ಲಿ ವಿಶ್ವ ವಿದ್ಯಾನಿಲಯದ ಆಂತರಿಕ ಸಂಪನ್ಮೂಲದಿಂದ ರೂ.25 ಲಕ್ಷ ಹಣವನ್ನು ಮೀಸಲಿರಿಸಿ, ಪೀಠದ ಸಮರ್ಪಕ ಹಾಗೂ ರಚನಾತ್ಮಕ ಕೆಲಸಗಳಿಗೆ ಸರಕಾರದಿಂದ 1.50 ಕೋಟಿ ಅನುದಾನವನ್ನು ನಿರೀಕ್ಷಿಸಿತ್ತು. ಅಂತಿಮವಾಗಿ ಸರಕಾರದ ಅನುದಾನ ಬಂದ ಬಳಿಕವಷ್ಟೇ ಅಧ್ಯಯನ ಪೀಠ ಸ್ಥಾಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.

ಫೆ.20ರಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮತ್ತೆ ಪತ್ರ ಬರೆದು ವಿಶ್ವವಿದ್ಯಾನಿಲಯಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದು, ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದರು.

ದಶಕಗಳಿಂದ ಕುಂದಾಪ್ರ ಕನ್ನಡ ಅಕಾಡೆಮಿ ಅಥವಾ ಅಧ್ಯಯನ ಪೀಠಕ್ಕಾಗಿ ವಿವಿಧ ಸಂಘಟನೆಗಳು, ಸಾಹಿತಿಗಳು, ಸಂಶೋಧಕರು, ಸಾಹಿತ್ಯ ಸಮ್ಮೇಳನಗಳ ಠರಾವುಗಳ ಮೂಲಕ ಅಧ್ಯಯನ ಪೀಠ ಅಥವಾ ಅಕಾಡೆಮಿಗಾಗಿ ಮನವಿ ಮಾಡುತ್ತಲೇ ಬಂದಿದ್ದವು. ಅಂತಿಮವಾಗಿ ಮಂಗಳೂರು ವಿವಿ ಅಧ್ಯಯನ ಪೀಠ ಸ್ಥಾಪನೆಯ ನಿರ್ಣಯ ಕೈಗೊಂಡಿತ್ತು. ಕಳೆದ ವರ್ಷ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಹಿಂದಿನ ಸರಕಾರದ ಅವಧಿಯಲ್ಲಿ ಅಧೀವೇಶನಲ್ಲಿ ಅಕಾಡೆಮಿಗಾಗಿ ಹತ್ಕೊತ್ತಾಯವನ್ನು ಮಂಡಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಅಕಾಡೆಮಿ ರಚನೆ ಸಾಧ್ಯವಿಲ್ಲ ಎಂದಿದ್ದರು. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಕೂಡ ಅಧ್ಯಯನ ಪೀಠಕ್ಕೆ ಅನುದಾನ ದೊರಕಿಸಿಕೊಡುವ ಬಗ್ಗೆ ಪ್ರಯತ್ನಿಸಿದ್ದು, ಕಳೆದ ಅವಧಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದರು. ಈ ಭಾರಿಯೂ ಮತ್ತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಮಾಡಿದ್ದರು. ಸದ್ಯ ಆರ್ಥಿಕ ಇಲಾಖೆಯ ಅನುಮೋದನೆ ದೊರೆತು ಜಿಯೋ ಟ್ಯಾಗಿಂಗ್‌ ಬಾಕಿ ಇದೆ.

ಕುಂದಾಪುರ ನೆಲದ ಭಾಷೆಯಾಗಿರುವ ಕುಂದಾಪ್ರ ಕನ್ನಡದ ತುಲನಾತ್ಮಕ ಅಧ್ಯಯನದ ಕುಂದಾಪ್ರ ಕನ್ನಡ, ಭಾಷೆಯ ಉಳಿವು, ಪ್ರಸರಣ, ದಾಖಲಾತಿ ದೃಷ್ಟಿಯಿಂದ, ಕುಂದಾಪ್ರ ಕನ್ನಡದಲ್ಲಿ ಸಾಹಿತ್ತಿಕ ಚಟುವಟಿಕೆಗಳು, ಸಂಶೋಧನೆ, ವಿಚಾರ ಸಂಕೀರಣ, ಭಾಷಾ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳು, ಈ ನೆಲದ ಐತಿಹ್ಯವನ್ನು ಬೆಳಕಿಗೆ ತರುವ ಕಾರ್ಯಚಟುವಟಿಕೆಗಳು ಸೇರಿದಂತೆ ಹಲವು ವಿಚಾರಗಳು ಅಧ್ಯಯನ ಪೀಠದ ಮೂಲಕ ನಡೆಯಬೇಕು ಎಂಬುದು ಕುಂದಾಪ್ರ ಕನ್ನಡಿಗರ ಆಶಯವಾಗಿತ್ತು.

ನಾಮಕಾವಸ್ಥೆ ಆಗದಿರಲಿ:
ಬಹುಪಾಲು ಅಧ್ಯಯನ ಪೀಠಗಳು ನಾಮಕಾವಸ್ಥೆಯ ಸಂಸ್ಥೆಗಳಾಗಿವೆ. ಸರಕಾರದಿಂದ ಸಮರ್ಪಕ ಅನುದಾನ ದೊರೆಯದಿರುವುದು, ಜಾತಿ ಹಾಗೂ ಹುದ್ದೆಯ ರಾಜಕಾರಣ, ಹಾಲಿ ಉಪನ್ಯಾಸಕರಿಗೆ ವಹಿಸುವ ಹೆಚ್ಚುವರಿ ಜವಾಬ್ದಾರಿ ಮೊದಲಾದ ಕಾರಣಗಳಿಂದಾಗಿ ಅಧ್ಯಯನ ಪೀಠಗಳು ಸೊರಗಿವೆ. ಆರಂಭಿಕ ನಿಧಿಯ ಜೊತೆಗೆ ಸರಕಾರ ಹೆಚ್ಚಿನ ಅನುದಾನ ಒದಗಿಸುವುದು ಅಗತ್ಯವಿದೆ.

Exit mobile version