Kundapra.com ಕುಂದಾಪ್ರ ಡಾಟ್ ಕಾಂ

ರೂ.50,000ಕ್ಕೂ ಮೀರಿದ ದಾಖಲೆಗಳಿಲ್ಲದ ನಗದು ಕೊಂಡೊಯ್ಯುವಂತಿಲ್ಲ: ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಮರ್ಪಕ ದಾಖಲೆಗಳಿಲ್ಲದೆ ರೂ.50,000/- ಕ್ಕೂ ಮೀರಿದ ನಗದು ಹಣವನ್ನು ಕೊಂಡೊಯ್ಯುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ತಿಳಿಸಿದ್ದಾರೆ.

ಒಂದು ವೇಳೆ ದಾಖಲೆ ರಹಿತ ನಗದು ದೊರೆತಲ್ಲಿ ಸದ್ರಿ ನಗದನ್ನು ಮುಟ್ಟುಗೋಲು ಹಾಕಲಾಗುವುದು, ಹಾಗೂ ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ನಗದು ಹಣ ಸಾಗಾಣಿಕೆ ಬದಲಿಗೆ ಖಾತೆ ವರ್ಗಾವಣೆ, UPI ಹಾಗೂ ಇತರೆ ಮಾಧ್ಯಮದ ಮೂಲಕ ಹಣವನ್ನು ವರ್ಗಾಯಿಸಲು ಕ್ರಮವಹಿಸುವುದು. ಸಂಶಯಾಸ್ಪದ ವ್ಯವಹಾರಗಳ ಮೇಲೆ ನಿಗಾ ಇಡಲು ಬ್ಯಾಂಕ್ ಮತ್ತು ಆದಾಯ ತೆರಿಗೆ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಚುನಾವಣಾ ಕೋಶ ಇರುತ್ತದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯ ಪೂರ್ಣ ಪ್ರಮಾಣದ ಅನುಷ್ಟಾನಕ್ಕಾಗಿ ಒಟ್ಟು 15 ಚೆಕ್ಪೋಸ್ಟ್ಗಳನ್ನು ಗುರುತಿಸಿದ್ದು, ಸದರಿ ಚೆಕ್ಪೋಸ್ಟ್ಗಳಲ್ಲಿ 24×7 ಮಾದರಿಯಲ್ಲಿ ಕಾರ್ಯ ನಿರ್ವಹಿಸಲು ಒಟ್ಟು 52 SST ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ. ಸದ್ರಿ ಚೆಕ್ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತಮ್ಮ ವಾಹನಗಳನ್ನು ತಪಾಸಣೆಗೊಳಿಸಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದಿದ್ದಾರೆ.

ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಲ್ಲಿ HOME VOTING ಮಾಡಲು ಬಯಸುವ ಹಿರಿಯ ನಾಗರೀಕರ ವಯಸ್ಸನ್ನು ಆಯೋಗವು 80 ರಿಂದ 85 ವರ್ಷಕ್ಕೆ ಪರಿಷ್ಕರಿಸಲಾಗಿರುತ್ತದೆ. ಹಿರಿಯ ನಾಗರೀಕರು ಹಾಗೂ ವಿಕಲಚೇತನರ ಮನೆಯಂದಲೇ ಮತ ಚಲಾಯಿಸಲು ಅವಕಾಶವಿದೆ. ಆದಾಗ್ಯೂ ಮತದಾನವು ಪ್ರಜಾಪ್ರಭುತ್ವ ಹಬ್ಬವಾಗಿರುತ್ತದೆ. ಮತಗಟ್ಟೆಗೆ ತೆರಳಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಈ ಹಬ್ಬದಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕು. ಹಿರಿಯ ನಾಗರೀಕರು ಹಾಗೂ ವಿಕಲಚೇತನರಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಲು ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ತೀರಾ ಅಶಕ್ತರು ಮಾತ್ರ HOME VOTING ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದಿದ್ದಾರೆ.

ಎಲ್ಲಾ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕಾರ ನೀಡುವಂತೆ ಉಡುಪಿ ಚಿಕ್ಕಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version