ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪೋಷಕರ ಮತ್ತು ವಿದ್ಯಾರ್ಥಿಗಳ ಅಭಿರುಚಿ ವಿಭಿನ್ನವಾದರೂ ಸಹ ಪ್ರಸ್ತುತ ಪೋಷಕರ ಅಭಿರುಚಿಗಿಂತ ವಿದ್ಯಾರ್ಥಿಗಳ ಅಭಿರುಚಿಗೆ ಪ್ರೋತ್ಸಾಹ ದೊರೆಯಬೇಕು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಮಕ್ಕಳ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸಬೇಕು. ಶಾಲೆಗಳ ಅಭಿವೃದ್ಧಿ ಊರಿನ ಪ್ರಗತಿಯ ಸಂಕೇತವಾಗಿದೆ ಎಂದು ಘಟಪ್ರಭಾ ಉದ್ಯಮಿ ಎಚ್. ಜಯಶೀಲ ಎನ್. ಶೆಟ್ಟಿ ಹೇಳಿದರು.
ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತಮ್ಮ ಹೆತ್ತವರಾದ ದಿ. ಗುಲಾಬಿ ನಾರಾಯಣ ಶೆಟ್ಟಿ ಸ್ಮರಣಾರ್ಥ ಹೇರಂಜಾಲು, ಮೆಟ್ಟಿನಹೊಳೆ, ಕಾಲ್ತೋಡು ಸರ್ಕಾರಿ ಶಾಲೆಗಳಿಗೆ ತಲಾ ಎಂಟು ಲಕ್ಷದ ವೆಚ್ಚದ ಶಾಲಾ ವಾಹನ ಹಸ್ತಾಂತರಿಸಿ ಮಾತನಾಡಿದರು. ಹುಟ್ಟೂರಿನಲ್ಲಿ ಒಂದು ಶಾಶ್ವತ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪ್ರತಿಯೊಂದು ಮಗುವೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದೆಂಬ ನೆಲೆಯಲ್ಲಿ ದೂರದಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನವನ್ನು ಒದಗಿಸಲಾಗಿದೆ. ಗಳಿಕೆಯ ಒಂದಿಷ್ಟು ಭಾಗ ಇಂತಹ ಅವಕಾಶಗಳಿಗೆ ಬಳಸಿದಾಗ ನಮ್ಮ ಋಣ ಸಂದಾಯವಾಗುವುದು. ಈ ಸತ್ಕಾರ್ಯದಿಂದ ಹೃದಯ ತುಂಬಿದೆ ಎಂದ ಅವರು, ಆಸಕ್ತಿ ಮತ್ತು ಬದಲಾವಣೆಯ ಕಾಳಜಿಗಳಿದ್ದಾಗ ಸಂಸ್ಥೆಯನ್ನು ಅಥವಾ ಅಲ್ಲಿನ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಎಸ್ಡಿಎಂಸಿ ಮತ್ತು ಶಿಕ್ಷಕರು ಕಾರ್ಯಪ್ರವೃತರಾಗಬೇಕು ಎಂದು ಸಲಹೆ ನೀಡಿದರು.
ಮೆಟ್ಟಿನಹೊಳೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ವಿವೇಕ ನಾಯಕ್, ಮುಖ್ಯಶಿಕ್ಷಕ ಆನಂದ ಎಸ್., ಕಾಲ್ತೋಡು ಶಾಲಾ ಎಸ್ಡಿಎಂಸಿ ಅಧ್ಯಕ್ಷ ವಿಜೇಂದ್ರ ಆಚಾರ್ಯ, ಮುಖ್ಯಶಿಕ್ಷಕ ವಿನಾಯಕ ಮೆರ್ಟ, ಹೇರಂಜಾಲು ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ನಾಗರತ್ನ ಆರ್. ಸಾಲಿಮನೆ, ಮುಖ್ಯಶಿಕ್ಷಕ ಜಯಾನಂದ ಪಟಗಾರ್, ಕಾಲ್ತೋಡು ಗ್ರಾಪಂ ಅಧ್ಯಕ್ಷ ಬಟ್ನಾಡಿ ಅಣ್ಣಪ್ಪ ಶೆಟ್ಟಿ, ಟಾಟಾ ಮೋಟರ್ಸ್ನ ಸಹಾಯಕ ಜನರಲ್ ಮ್ಯಾನೇಜರ್ ಸತೀಶ ಗಾಣಿಗ ಇದ್ದರು.
ಮೆಟ್ಟಿನಹೊಳೆ ಶಾಲಾ ದೈಶಿಶಿ ರಾಜೀವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬೆಳಿಗ್ಗೆ ಶ್ರೀ ಗುಡೇ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

