Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕನ್ನಡ ಮಾಸಾಚರಣೆ ಡಿಂಡಿಮ ಉದ್ಘಾಟನೆ

ಕುಂದಾಪುರ: ಎಲ್ಲಾ ಭಾರತೀಯ ಭಾಷೆಗಳನ್ನು ಕಂಪ್ರೂಟರ್‌ಗೆ ಅಳವಡಿಸುವುದು ನನ್ನ ಗುರುತರ ಜವಾಬ್ಧಾರಿಯಾಗಿತ್ತು, ಆದರೆ ನನ್ನ ಮೂಲ ಭಾಷೆ ಕನ್ನಡವಾಗಿದ್ದರಿಂದ ಮತ್ತು ಅತಿ ಸುಲಭವಾಗಿ ನನಗೆ ಕನ್ನಡ ಲಿಪಿ ಮತ್ತು ಭಾಷೆ ಗೊತ್ತಿರುವುದರಿಂದ ನನಗೆ ಕನ್ನಡದ ತಂತ್ರಾಂಶದ ಅಭಿವೃದ್ಧಿಯತ್ತ ಹೆಚ್ಚು ಆಸಕ್ತನಾಗಲು ಸಾಧ್ಯವಾಯಿತು ಎಂದು ಕನ್ನಡ ತಂತ್ರಾಂಶ ಸಂಶೋಧಕ ನಾಡೋಜ ಕೆ.ಪಿ.ರಾವ್ ಹೇಳಿದರು.

ಕನ್ನಡ ವೇದಿಕೆ ಕುಂದಾಪುರ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವಂಬರ್ ತಿಂಗಳ ಎಲ್ಲಾ ಭಾನುವಾರಗಳು ನಡೆಯಲಿರುವ ಎರಡನೇ ವರ್ಷದ ಕನ್ನಡ ಮಾಸಾಚರಣೆ ’ಡಿಂಡಿಮ’ ಕಾರ್ಯಕ್ರಮವನ್ನು ಭಾನುವಾರ ಸಂಜೆ ಸ.ಪ.ಪೂ.ಕಾಲೇಜಿನ ಕಲಾಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.

ಒಂದು ಭಾರತೀಯ ಲಿಪಿಯಲ್ಲಿ ಮೊದಲ ಬಾರಿಗೆ ಕಂಪ್ಯೂಟರ್‌ಗೆ ಅಳವಡಿಸಿದ್ದು ಸಿಂಧೂ ಲಿಪಿಗೆ. ನಂತರದಲ್ಲಿ ಕನ್ನಡ ಸೇರಿದಂತೆ ಇತರ ಭಾಷಾ ಲಿಪಿಗಳ ಅಳವಡಿಕೆ ಸಾಧ್ಯವಾಯಿತು. ಕನ್ನಡೆ ಭಾಷೆಯನ್ನು ಕಂಪ್ಯೂಟರ್‌ನಲ್ಲಿ ಹೇಗೆ ಅಳವಡಿಸಿಕೊಳ್ಲಬೇಕು? ಮಾಹಿತಿ ತಂತ್ರಜ್ಞಾನಗಳಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳುವ ಮೂಲಕ ಕನ್ನಡದ ಅಭಿವೃದ್ಧಿಗೆ ಹಚ್ಚು ಪ್ರಯತ್ನಶೀಲನಾಗಬೇಕಾಗಿದೆ.

ಐದು ಶತಮಾನಗಳ ಹಿಂದೆ ಪಾಣಿನಿಯ ಮಾಹೇಶ್ವರ ಸೂತ್ರಗಳನ್ನು ಮೂಲವಾಗಿಟ್ಟುಕೊಂಡು ಲಿಪಿಗಳನ್ನು ಪಡೆಯಲಾಗಿದೆ. ಯೂನಿಕೋಡ್‌ಗೂ ಶಬ್ಧಾಧಾರವೇ ಮೂಲವಾಗಿದ್ದು, ಮಾಹೆಶ್ವರ ಸೂತ್ರವನ್ನು ಇಲ್ಲಿಯೂ ಅಳವಡಿಕೆಯಾಗುತ್ತದೆ. ಸಂಸ್ಕೃತದ ಪಂಡಿತರೂ ಹಲವು ಬಾರಿ ಮಾಹೀಶ್ವರ ಸೂತ್ರವನ್ನು ಅರ್ಥಮಾಡಿಕೊಳ್ಳುವಲ್ಲಿ ಗೊಂದಲಕ್ಕೀಡಾಗುತ್ತಿದ್ದಾರೆ ಎಂದು ಹೇಳಿದರು.

ಆದರೂ ಕನ್ನಡದ ಭಾಷೆ ಹಾಗೂ ಅದರ ಅಭಿವೃದ್ಧಿಯಲ್ಲಿ ಮಾಧ್ಯಮಗಳು ಒಂದು ಹೆಜ್ಜೆ ಮುಂದೆ ಹೋಗಿರುವ ಕಾರಣಕ್ಕೆ ಕನ್ನಡ ಇನ್ನೂ ಉಳಿದುಕೊಂಡಿದೆ. ಎಂದು ಮಾಧ್ಯಮಗಳ ಪ್ರಯತ್ನವನ್ನು ಪ್ರಶಂಸಿದ ಕೆ.ಪಿ.ರಾವ್. ಕನ್ನಡ ಸಂಘಟನೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯತ್ತ ಹೋಗಬೇಕಾಗಿದೆ ಎಂದರು.

ನಂತರ ನಡೆದ ಕನ್ನಡದ ಹಾದಿ ಹೆಜ್ಜೆಗಳು ಎನ್ನುವ ವಿಚಾರವಾಗಿ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ ಮಣಿಪಾಲ ಇದರ ನಿರ್ದೇಶಕರಾದ ಪ್ರೊ. ವರದೇಶ್ ಹಿರೇಗಂಗೆ ಮಾತುಕತೆಯಲ್ಲಿ ಭಾಗವಹಿಸಿ ಮಾತನಾಡಿ, ಜಗತ್ತಿನಾದಯಂತ ಇಂಗ್ಲೀಷರು ವಸಾಹತುಶಾಹಿಗಳ ಮೂಲಕ ಆಡಳಿತ ನಡೆಸಿದ ಪರಿಣಾಮ ಇಂಗ್ಲೀಷ್ ವಿಶ್ವವ್ಯಾಪಿಯಾಗಿದೆ. ಪ್ರಭುತ್ವದ ಭಾಷೆಯಾಗಿ ಇಂಗ್ಲೀಷ್ ಬೆಳೆಯಲು ಅದು ಕಾರಣವಾಗುದೆ ಆದರೆ ಯಾವುದೇ ಒಂದು ಭಾಷೆಯ ಪ್ರಭುತ್ವ ಉಂಟಾಗಿ ಉಳಿದ ಭಾಷೆಗಳು ಉಪೇಕ್ಷೆಗೆ ಒಳಗಾದಾರೆ ಅಲ್ಲಿ ಸಮಸ್ಯೆ ಉಂಟಾಗುತ್ತದೆ. ಭಾಷೆಗಳು ಪ್ರಭುತ್ವದ ಭಾಷೆಯಾಗದೇ ಜನರ ಭಾಷೆಯಾಗಬೇಕು ಎನ್ನುವುದೇ ನನ್ನ ಚಿಂತನೆ ಎಂದು ಹೇಳಿದರು. ಕುಂದಾಪುರದ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಮಾತುಕತೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜನಾನುರಾಗಿ ಬಸ್ ಚಾಲಕ ಹೆಚ್ ಹಂಝಾ ವಕ್ವಾಡಿ ಅವರಿಗೆ ನುಡಿ ಗೌರವ ಸಲ್ಲಿಸಲಾಯಿತು. ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡದ ಕಾರ್ಯಕ್ರಮಗಳ ಆಯೋಜಿಸುವುದು, ಕನ್ನಡದ ಅಧ್ಯಯನಶೀಲರಿಗೆ ವೇದಿಕೆ ಕಲ್ಪಿಸುವುದು, ಕನ್ನಡದ ಕಟ್ಟಾಳುಗಳನ್ನು ಗುರುತಿಸುವುದು ವೇದಿಕೆಯ ಉದ್ದೇಶ ಎಂದರು.

ಕಾರ್ಯಕ್ರಮಕ್ಕೆ ಮುನ್ನ ನಡೆದ ಕನ್ನಡಕ್ಕಾಗಿ ವಾಹನ ಜಾಥಾವನ್ನು ಡಿವೈಎಸ್ಪಿ ಮಂಜುನಾಥ ಶೆಟ್ಟಿ ಉದ್ಘಾಟಿಸಿದರು. ನಂತರ ಜಾಥಾ ಕುಂದಾಪುರದ ಮುಖ್ಯರಸ್ತೆಯಲ್ಲಿ ಸಂಚರಿಸಿ ಕುಂದಾಪುರ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಸಮಾಪನಗೊಂಡಿತು. ಬಸ್ರೂರು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಕನ್ನಡ ವೇದಿಕೆಯ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಹಳ್ನಾಡ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ನಂತರ ನಾಟ್ಯ ನಿಲಯ ಮಂಜೇಶ್ವರ ಕಾಸರಗೋಡು ತಂಡದಿಂದ ನಾಟ್ಯೋಲ್ಲಾಸ ಎನ್ನುವ ಕಾರ್ಯಕ್ರಮ ನಡೆಯಿತು.

Exit mobile version