Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಆರಾಧನಾ ಆರ್ಟ್ ಕ್ಯಾಂಪ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ:
ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಮೋಜು ಮಸ್ತಿಗೆ ಸಮಯ ಮೀಸಲಿಡದೆ, ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹಲವಾರು ವಿಷಯಗಳ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ. ಮಕ್ಕಳಲ್ಲೂ ಕನಸು ಕಾಣುವ ತುಡಿತವಿರುತ್ತದೆ, ಆ ಕನಸಿಗೆ ಬಣ್ಣ ತುಂಬುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರತಿಷ್ಠಾನದ ಟ್ರಸ್ಟಿ ಸುಶೀಲ ಸೋಮಶೇಖರ್ ಅವರು ಹೇಳಿದರು.

ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಮೂರು ದಿನಗಳ ಆರ್ಟ್ ಕ್ಯಾಂಪ್ ಆರಾಧನಾ-2024 (ಬೆರಳುಗಳಲ್ಲಿ ಭಾವಗೀತೆ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಕಾರಂತ ಥೀಮ್ ಪಾರ್ಕ್‌ನಲ್ಲಿ ಮಕ್ಕಳಿಗಾಗಿ ಹಲವಾರು ಚಟುವಟಿಕೆ, ತರಬೇತಿ ನಡೆಯುತ್ತಿರುತ್ತದೆ ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಚಿತ್ರಕಲಾ ಶಿಕ್ಷಕಿ ಐಶ್ವರ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ಕೋಟ ನರೇಂದ್ರ ನಿರೂಪಿಸಿ, ನಕ್ಷತ್ರ ವಂದಿಸಿದರು.

Exit mobile version