ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಮೇ23: ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿಗಳು ನಷ್ಟವಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿಯಲ್ಲಿ ಮಳೆಯಾಗುತ್ತಿದ್ದು, ನಿನ್ನೆ ಹಾಗೂ ಇಂದು ಬೈಂದೂರು ಭಾಗದಲ್ಲಿ 7 ಮೀ.ಮೀಗೂ ಹೆಚ್ಚಿನ ಮಳೆ ಸಂಜೆ ವೇಳೆಗೆ ಸುರಿದಿದೆ. ಭಾರಿ ಮಳೆಗೆ ಕಳವಾಡಿ ಶ್ರೀ ಮಾರಿಕಾಂಬಾ ದೇಗುಲದ ಎದುರು ಹೊಸತಾಗಿ ನಿರ್ಮಿಸಲಾಗಿದ್ದ ರೂ.15ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಊಟದ ಹಾಲ್ ಮೇಲ್ಚಾವಣಿ ಕುಸಿದು ಬಿದ್ದಿದೆ. ಬೈಂದೂರು ಪೊಲೀಸ್ ಠಾಣೆ ಆವರಣದಲ್ಲಿ ಹಳೆ ವೃತ್ತಿನಿರೀಕ್ಷಕರ ಕಛೇರಿ ಮೇಲೆ ಮರ ಉರುಳಿ ಬಿದ್ದಿದೆ. ಬೈಂದೂರು ರಥಬೀದಿಯ ನವೀನ್ ವೈನ್ಸ್ ಹಿಂಭಾಗದ ಮನೆಯ ಶೌಚಗೃಹದ ಮೇಲ್ಛಾವಣಿ ಹಾರಿ ಹೋಗಿದೆ. ಮನೆ ಮಾಡು ಕುಸಿತ, ಮರ ಉರುಳಿಬಿದ್ದಿರುವುದು, ರಸ್ತೆ ಮೇಲೆ ವಿದ್ಯುತ್ ಕಂಬ ಉರುಳಿರುವುದು ಸೇರಿದಂತೆ ವಿವಿಧ 16ರಕ್ಕೂ ಹೆಚ್ಚಿನ ಘಟನೆ ನಡೆದಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಗಾಳಿ ಮಳೆಗೆ ಬೈಂದೂರಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ರಾತ್ರಿಯ ತನಕವೂ ದುರಸ್ತಿಯಾಗಿರಲಿಲ್ಲ. ಘಟನಾ ಸ್ಥಳಗಳಿಗೆ ಗ್ರಾಮ ಲೆಕ್ಕಿಗರು, ತಹಶಿಲ್ದಾರರು ಭೇಟಿ ನೀಡಿದ್ದಾರೆ.