ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ,ಮೇ.27: ಭಿನ್ನ ಮಾದರಿಯ ರಕ್ತದ ಗುಂಪಿಗೆ ಸೇರಿದ ಮೂತ್ರ ಪಿಂಡಗಳನ್ನು (kidney) ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವುದರ ಮೂಲಕ ಕುಂದಾಪುರ ಮೂಲದ ವೈದ್ಯ ಡಾ| ಎ.ಕೆ. ಇಸ್ತಿಯಾಕ್ ಅಹ್ಮದ್ ಮತ್ತು ಅವರ ತಂಡವು ಮಹಿಳೆಯೊಬ್ಬರ ಪ್ರಾಣ ಉಳಿಸಿದೆ.
ವೈದ್ಯ ಲೋಕಕ್ಕೆ ಸವಾಲಾಗಿರುವ ಈ ಪ್ರಕರಣವನ್ನು ಕೈಗೆತ್ತಿಕೊಂಡ ಅಬುಧಾಬಿ ಬುರ್ಜಿಲ್ ಮೆಡಿಕಲ್ ಸಿಟಿಯಲ್ಲಿ ನೆಫ್ರಾಲಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ತಜ್ಞರಾಗಿರುವ ಡಾ| ಎ.ಕೆ. ಇಸ್ತಿಯಾಕ್ ಅವರು ಅನಿವಾಸಿ ಭಾರತೀಯ ಮಹಿಳೆಯೊಬ್ಬರಿಗೆ ಅವರ ಪತಿಯ ಭಿನ್ನ ರಕ್ತ ಮಾದರಿಯ ಮೂತ್ರಪಿಂಡಗಳನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನಿವಾಸಿ ಭಾರತೀಯರಾದ ರೇವತಿ ಕಾರ್ತಿಕೇಯನ್ ದಂಪತಿ ತಮ್ಮ ಎರಡು ಪುಟ್ಟ ಹಾಗೂ ಮಕ್ಕಳೊಂದಿಗೆ ಅಬುಧಾಬಿಯಲ್ಲಿದ್ದಾರೆ. 32 ವರ್ಷ ಹರೆಯದ ರೇವತಿ ಅವರು ಮೂತ್ರಪಿಂಡಗಳಲ್ಲಿ 2018ರಿಂದ ಸೋಂಕು ಕಂಡು ಬಂದಿತ್ತು. 2022ರ ಅನಂತರ ಹಿಮೋ ಡಯಾಲಿಸಿಸ್‌ನಂತಹ ಹಲವು ಚಿಕಿತ್ಸೆಗಳ ಅನಂತರವೂ ಹೃದಯ ಸ್ತಂಭನದಿಂದ ನಿಷ್ಕ್ರಿಯಗೊಂಡ ಅವರ ಮೂತ್ರ ಪಿಂಡಗಳನ್ನು ಬದಲಾಯಿಸಲೇಬೇಕಾದ ಅನಿವಾರ್ಯ ಬಂದಿತು. ಹಾಗಾಗಿ ದಂಪತಿ ಮೃತ ದೇಹಗಳ ಸಹಿತ ಇನ್ನಿತರ ಜೀವಂತ ಕಿಡ್ನಿ ದಾನಿಗಳ ಮೊರೆ ಹೋದರೂ ಯಾವುದೇ ಫಲ ಸಿಗಲಿಲ್ಲ. /ಕುಂದಾಪ್ರ ಡಾಟ್ ಕಾಂ ವರದಿ/
ಮಗಳ ಯಾತನೆ ದಿನೇದಿನೆ ಹೆಚ್ಚುತ್ತಿರುವುದನ್ನು ನೋಡಿದ ರೇವತಿ ತಂದೆ ಮಗಳಿಗೆ ತಮ್ಮದೇ ಕಿಡ್ನಿ ದಾನಕ್ಕೆ ಮುಂದಾದರು. ಅವರಿಬ್ಬರ ರಕ್ತದ ಮಾದರಿ ಹೋಲಿಕೆಯಾದರೂ ತಂದೆಯ ಹೃದಯ ಸಮಸ್ಯೆಯಿಂದ ಸಾಧ್ಯವಾಗಲಿಲ್ಲ. ಇತ್ತ ಕಾರ್ತಿಕೇಯನ್ ಅವರು ತನ್ನ ಕಿಡ್ನಿ ನೀಡಿ ಪತ್ನಿಯನ್ನು ಬದುಕಿಸಲು ಮುಂದಾದರೂ ರಕ್ತದ ಗುಂಪು ಬೇರೆಯಾಗಿದ್ದರಿಂದ ಕಸಿ ಮಾಡಲು ಯಾರೂ ಮುಂದಾಗಲಿಲ್ಲ.
ಈ ನಡುವೆ, ಭಿನ್ನ ಮಾದರಿಯ ರಕ್ತವಾದರೂ ಮೂತ್ರ ಪಿಂಡದ ಕಸಿ ಸಾಧ್ಯತೆ ಇದೆ ಎಂದು ಯಾರಿಂದಲೋ ಮಾಹಿತಿ ಪಡೆದ ಪತಿ ಕಾರ್ತಿಕೇಯನ್, ಅಬುಧಾಬಿ ಬುರ್ಜಿಲ್ ಮೆಡಿಕಲ್ ಸಿಟಿಯಲ್ಲಿರುವ ನೆಫ್ರಾಲಜಿಸ್ಟ್ ಮತ್ತು ಟ್ರಾನ್ಸ್ ಪ್ಲಾಂಟ್ ತಜ್ಞ ಡಾ| ಎ.ಕೆ.ಇಸ್ತಿಯಾಕ್ ಅಹ್ಮದ್ ಅವರನ್ನು ಸಂಪರ್ಕಿಸಿದರು. ಅಲ್ಲಿ ಪತ್ನಿ ರೇವತಿ ಬದುಕುಳಿಯುವ ಆಸೆ ಅಲ್ಲಿ ಮತ್ತೆ ಚಿಗುರೊಡೆಯಿತು.
ಬುರ್ಜಿಲ್ ಆಸ್ಪತ್ರೆಯ ಡಾ| ಇಸ್ತಿಯಾಕ್ ನೇತೃತ್ವದ ಡಾ| ರೀಹಾನ್ ಸೈಫ್, ಡಾ| ವೆಂಕಟ್ ಸೈನರೇಶ್, ಡಾ| ರಾಮಮೂರ್ತಿ, ಜಿ. ಭಾಸ್ಕರನ್, ಡಾ| ನಿಕೋಲಸ್ ವೋನ್, ನೆಫ್ರಾಲಜಿಸ್ಟ್ ವೈದ್ಯ ತಂಡವು ರೇವತಿ ಅವರ ಮೂತ್ರ ಪಿಂಡ ಕಸಿ ನಡೆಸಿದ್ದು, ಅದು ದೇಹಕ್ಕೆ ಹೊಂದಾಣಿಕೆಯಾಗಿದೆ. ರೋಗಿಯು ಸಹ ಕಸಿ ಮಾಡಲು ಬಹಳ ಉತ್ಸುಕನಾಗಿದ್ದರಿಂದ, ವೈದ್ಯರು ಮುಂದುವರಿದರು. ಹೆಚ್ಚುವರಿಯಾಗಿ, ಮೊದಲೇ ಅಸ್ತಿತ್ವದಲ್ಲಿರುವ ಪ್ರತಿಕಾಯಗಳನ್ನು ತೊಡೆದುಹಾಕಲು ಪ್ಲಾಸ್ಕಾಫೆರೆಸಿಸ್ ಅನ್ನು ನಡೆಸಲಾಯಿತು. ಮತ್ತು ಕಿಡ್ನಿ ಕಸಿ ಮಾಡುವ ಮೊದಲು ವಿಶೇಷ ಚುಚ್ಚುಮದ್ದಿನ ಮೂಲಕ ಹೊಸ ಪ್ರತಿಕಾಯಗಳ ರಚನೆಯನ್ನು ನಿಗ್ರಹಿಸಲಾಯಿತು. ನಾಲ್ಕು ಗಂಟೆಗಳ ಕಾಲ ರೊಬೋಟಿಕ್ ತಂತ್ರಜ್ಞಾನದಿಂದ ಕಸಿ ಕ್ರಿಯೆ ನಡೆಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಕುಂದಾಪುರದ ಉದ್ಯಮಿ, ಖಾರ್ವಿಕೇರಿ ಗರ್ಲ್ಸ್ ಶಾಲೆ ಬಳಿ ನಿವಾಸಿ, ಹಾಜಿ ಅಬ್ದುಲ್ ಖಾದರ್ ಯೂಸುಫ್ ಅವರ ಪುತ್ರ ಡಾ| ಇಸ್ತಿಯಾಕ್, ಮಂಗಳೂರಿನ ಕೆಎಂಸಿಯಲ್ಲಿ ಎಂಬಿಬಿಎಸ್, ಎಂಡಿ ಪದವಿ ಪಡೆದವರು. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಅಬುದಾಭಿಯ ಬುರ್ಜಿಲ್ ಮೆಡಿಕಲ್ ಸಿಟಿಯಲ್ಲಿ ಮುಖ್ಯ ವೈದ್ಯಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/