ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಶೇರುಗಾರ್ ಅವರಿಗೆ ಶ್ರೀ ರಾಮಕ್ಷತ್ರೀಯ ಗಣೇಶೋತ್ಸವ ಸುವರ್ಣ ಸಮಿತಿ ಹಾಗೂ ಇತರ ಸಮಾಜ ಸೇವ ಸಂಘಟನೆಗಳು ಜತೆಯಾಗಿ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಪೌರ ಸನ್ಮಾನ ನೀಡಿ ಗೌರವಿಸಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುಂದಾಪುರದ ತಹಸೀಲ್ದಾರ್ ಗಾಯತ್ರಿ ನಾಯಕ್ ಮಾತನಾಡಿ, ಆಧುನೀಕತೆಯ ಬದಲಾವಣೆಯನ್ನು ಕಾಣುತ್ತಿರುವ ಕರಾವಳಿ ಜಿಲ್ಲೆಗಳಲ್ಲಿ ನಮ್ಮ ಸಾಂಸ್ಕೃತಿಕ ಸೊಬಗಿನ ರಾಯಭಾರಿಯಂತಿರುವ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಉಳಿದುಕೊಂಡಿರುವ ಕಾರಣದಿಂದಾಗಿ ಈ ಭಾಗದ ಯಕ್ಷಗಾನ ಕಲಾವಿದರುಗಳು ಕಲಾ ಶೋತ್ರುಗಳ ಮನದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸಿ-ಬೆಳೆಸುತ್ತಿರುವ ಯಕ್ಷಗಾನ ಕಲಾವಿದರ ಪರಿಶ್ರಮಕ್ಕೆ ಪದ್ಮಭೂಷಣ, ರಾಜ್ಯೋತ್ಸವ ಮುಂತಾದ ಪ್ರಶಸ್ತಿಗಳನ್ನು ನೀಡುವ ಮೂಲಕ ಈ ಪ್ರಶಸ್ತಿಗಳ ಹಿರಿಮೆ ಹೆಚ್ಚಿದೆ. ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗುವ ಈ ಕಾಲಘಟ್ಟದಲ್ಲಿ ಅರ್ಹರಿಗೆ ಪ್ರಶಸ್ತಿ ಬರುವುದರಿಂದ ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಶೇರುಗಾರ್ ಅವರು 4ನೇ ತರಗತಿಯವರೆಗೆ ಮಾತ್ರ ಶಿಕ್ಷಣವನ್ನು ಪಡೆದಿದ್ದ ತನಗೆ ಬದುಕನ್ನು ಕಲಿಸಿಕೊಟ್ಟಿದ್ದು ಯಕ್ಷಗಾನ ರಂಗ. 6 ರೂಪಾಯಿ ವೀಳ್ಯಕ್ಕಾಗಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನ ಇಂದು ಲಕ್ಷಾಂತರ ರೂಪಾಯಿ ಮಟ್ಟದವರೆಗೂ ಬೆಳೆದಿದ್ದರೂ, ಯಕ್ಷಗಾನ ಕಲಾವಿದರ ಜೀವನ ಮಟ್ಟದಲ್ಲಿ ನಿರೀಕ್ಷಿತ ತೃಪ್ತಿ ದೊರೆಕಿಲ್ಲ. ಹಿಂದೆ ಕಲಾವಿದನ ಮೇಲೆ ಅಭಿಮಾನವಿದ್ದಾಗ ಕಲಾಸಕ್ತರು ಬಂಗಾರ ನೀಡಿ, ಹಣ ನೀಡಿ ಗೌರವಿಸುತ್ತಿದ್ದರು. ಇದೀಗ ಕಾಲ ಬದಲಾಗಿದೆ ಪ್ರಶಸ್ತಿ, ಸನ್ಮಾನಗಳ ಹಿಂದೆ ಪ್ರಭಾವ ಬೇಕು ಎನ್ನುವ ಭಾವನೆಗಳು ಪ್ರಬಲವಾಗುತ್ತಿದೆ. 90 ರ ಹರಯಕ್ಕೆ ಸಮೀಸುತ್ತಿರುವ ನನಗೆ ಯಾಕೆ ಈ ಪ್ರಶಸ್ತಿ ಬರುತ್ತಿಲ್ಲ ಎನ್ನುವ ಖೇದ ಯಾವಾಗಲೂ ಇತ್ತು. ರಾಜ್ಯ ಸರ್ಕಾರ ಈ ಬಾರಿಯ ಪ್ರಶಸ್ತಿಗೆ ತನ್ನನ್ನು ಆಯ್ಕೆ ಮಾಡುವುದರೊಂದಿಗೆ ನನ್ನ ಮನದ ನೋವು ಮರೆಯಾಗಿದೆ. ಈ ಪ್ರಶಸ್ತಿ ನನ್ನ ಯಾವತ್ತೂ ಪ್ರೋತ್ಸಾಹಿಸಿದ ಯಕ್ಷಗಾನ ಪ್ರೀಯರಿಗೆ ಸಂದಾಯವಾಗಬೇಕು ಎಂದು ನುಡಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಕುಂದಾಪುರದ ಪುರಸಭಾ ಅಧ್ಯಕ್ಷೆ ಕಲಾವತಿ ಯು.ಎಸ್, ಉದ್ಯಮಿ ದತ್ತಾನಂದ ಜಿ, ರಾಮಕ್ಷತ್ರೀಯ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೆಟ್ಟಿನ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ಖಾರ್ವಿ ಸಮಾಜ ಸೇವ ಸಂಘದ ಅಧ್ಯಕ್ಷ ಜಯಾನಂದ ಖಾರ್ವಿ ವೇದಿಕೆಯಲ್ಲಿ ಇದ್ದರು.
ಜಿಲ್ಲಾ ಗೃಹ ರಕ್ಷಕದಳದ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಶ್ರೀ ರಾಮಕ್ಷತ್ರೀಯ ಗಣೇಶೋತ್ಸವ ಸುವರ್ಣ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಯು ಸ್ವಾಗತಿಸಿದರು, ಪತ್ರಕರ್ತ ಯು.ಎಸ್ ಶೆಣೈ ಸನ್ಮಾನ ಪತ್ರ ವಾಚಿಸಿದರು, ರಾಜಶೇಖರ ಹೆಗ್ಡೆ ಹಾಗೂ ಗೋಪಾಲ ಪೂಜಾರಿ ನಿರೂಪಿಸಿದರು, ರಾಮದಾಸ್ ನಾಯಕ್ ವಂದನೆ ಸಲ್ಲಿಸಿದರು.