Kundapra.com ಕುಂದಾಪ್ರ ಡಾಟ್ ಕಾಂ

ಪೊಲೀಸ್ ಜೀಪು ಅಪಘಾತ ಪ್ರಕರಣ: ಜೀಪು ಚಾಲಕ ನಿರ್ದೋಷಿ ಎಂದು ತೀರ್ಪು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪೊಲೀಸ್‌ ಇಲಾಖೆಯ ಜೀಪು ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು, ಜೀಪುನಲ್ಲಿದ್ದ ಎಸ್‌ಐ ಹಾಗೂ ಚಾಲಕ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಜೀಪು ಚಾಲಕ ರಾಮ ಅವರನ್ನು ಸಾಕ್ಷ್ಯಾಧಾರ ಕೊರತೆಯಿಂದ ನಿರ್ದೋಷಿಯೆಂದು ತೀರ್ಪು ನೀಡಲಾಗಿದೆ.

2013ರ ಮಾ.29 ರಂದು ಕುಂದಾಪುರದ ಗಾಂಧಿ ಮೈದಾನ ಬಳಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರದ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ರೋಹಿಣಿ ಡಿ. ಅವರು ಈ ತೀರ್ಪು ನೀಡಿದ್ದಾರೆ. ಅಂದು ಪೊಲೀಸ್‌ ಜೀಪಿನಲ್ಲಿ ಸಂಚರಿಸುತ್ತಿದ್ದ ಆಗಿನ ಕುಂದಾಪುರ ನಗರ ಠಾಣಾ ಎಸ್‌ಐ ರೇವತಿ ಅವರು ಜೀಪು ಚಾಲಕ, ಪೊಲೀಸ್‌ ಸಿಬ್ಬಂದಿ ರಾಮ ವಿರುದ್ಧವೇ ದೂರು ನೀಡಿದ್ದರು.

ಕುಂದಾಪುರ ನಗರ ಠಾಣಾ ಎಸ್‌ಐ ಆಗಿದ್ದ ರೇವತಿ ಅವರು 2013ರ ಮಾ. 28 ರ ರಾತ್ರಿ ಇಲಾಖೆ ಜೀಪಿನಲ್ಲಿ ಕುಂದಾಪುರ, ಕೋಟೇಶ್ವರ, ಕುಂಭಾಶಿ ಕಡೆ ರೌಂಡ್ಸ್‌ ಮುಗಿಸಿ, ಮಾ. 29 ರ ಬೆಳಗ್ಗಿನ ಜಾವ 2.20 ರ ಸುಮಾರಿಗೆ ವಾಪಾಸು ಕುಂದಾಪುರದ ಗಾಂಧಿ ಮೈದಾನ ಬಳಿಯ ಹೆದ್ದಾರಿಗೆ ಬಂದಾಗ ಎದುರಿನಿಂದ ವಾಹನವೊಂದು ಬಂದ ಪರಿಣಾಮ, ಅದಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಜೀಪು ಅಲ್ಲಿಯೇ ಪಾರ್ಕಿಂಗ್‌ ಲೈಟ್‌ ಹಾಕದೇ ನಿಲ್ಲಿಸಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಎಸ್‌ಐ ರೇವತಿ ಹಾಗೂ ಚಾಲಕ ರಾಮ ಇಬ್ಬರೂ ಗಾಯಗೊಂಡಿದ್ದರು. ರೇವತಿ ಅವರು ಚಾಲಕ ರಾಮ ವಿರುದ್ಧವೇ ದೂರು ನೀಡಿದ್ದರು. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಗಿನ ಸಂಚಾರ ಠಾಣಾ ಎಸ್‌ಐ ಬಿ. ಪರಮೇಶ್ವರಪ್ಪ ಅವರು ತನಿಖೆ ನಡೆಸಿ, ಪೊಲೀಸ್‌ ಜೀಪು ಚಾಲಕ ರಾಮ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೇ ವೇಳೆ ರೇವತಿ ಅವರು ಅಪಘಾತ ಪರಿಹಾರ ಕೋರಿ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಲಯಕ್ಕೆ ಎಂವಿಸಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 6 ಜನ ಸಾಕ್ಷಿಗಳ ವಿಚಾರಣೆ ನಡೆಸಿದ್ದು, ಈ ವೇಳೆ ದೂರುದಾರೆ ರೇವತಿ ಒಂದು ಕಡೆ ಎದುರಿನಿಂದ ವಾಹನ ಬರುತ್ತಿತ್ತು ಎಂದು ಹೇಳಿಕೆ ಕೊಟ್ಟಿದ್ದರೆ, ಮತ್ತೊಂದು ಕಡೆ ಎದುರಿನಿಂದ ಯಾವುದೇ ವಾಹನ ಬರುತ್ತಿರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ನೀಡಿದ ಹೇಳಿಕೆಗೂ, ಪರಿಹಾರ ಕೋರಿ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವಿಚಾರಣೆ ವೇಳೆ ನೀಡಿದ ಹೇಳಿಕೆಗಳೆರಡು ವ್ಯತಿರಿಕ್ತವಾಗಿತ್ತು. ಇದನ್ನೇ ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಪೊಲೀಸ್‌ ಅಧಿಕಾರಿಯಾಗಿದ್ದು, ಒಂದಕ್ಕೊಂದು ವ್ಯತಿರಿಕ್ತವಾಗಿದ್ದು, ನಂಬರ್ಲವಾದ ಸಾಕ್ಷ್ಯವೆಂದು ಕಂಡುಬಂದಿರುವುದಿಲ್ಲ ಎಂದು ಪರಿಗಣಿಸಿ ಆರೋಪಿ ರಾಮ ಅವರನ್ನ ನಿರ್ದೋಷಿಯೆಂದು ತೀರ್ಮಾನಿಸಿ, ಬಿಡುಗಡೆ ಮಾಡಿದೆ.

ಆರೋಪಿ ಪರ ಕುಂದಾಪುರದ ನ್ಯಾಯವಾದಿ ಬೇಳೂರು ಅವಿನಾಶ್‌ ಶೆಟ್ಟಿ ವಾದಿಸಿದ್ದಾರೆ.

Exit mobile version