ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪುಂದ ಗ್ರಾಮದ ಯುವಕ ಲೆಫ್ಟಿನೆಂಟ್ ಯು. ಆದರ್ಶ ವೈದ್ಯ ಅವರು ಸೇನಾ ಹೆಲಿಕಾಪ್ಟರ್ ಪೈಲೆಟ್ ಆಗಿ ನೇಮಕಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯದಿಂದ ಆಯ್ಕೆಯಾದ ಏಕೈಕ ಪೈಲೆಟ್ ಎನಿಸಿಕೊಂಡಿದ್ದಾರೆ.
ಇಂಜಿನಿಯರಿಂಗ್ ಪದವೀಧರರಾದ ಆದರ್ಶ ವೈದ್ಯ ಅವರು ಶಿಕ್ಷಣದ ಬಳಿಕ ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾರತೀಯ ಸೇನೆ ಆಯ್ಕೆಯಾದ ಬಳಿಕ ಖಾಸಗಿ ನೌಕರಿಗೆ ರಾಜೀನಾಮೆ ನೀಡಿ ಚೆನೈಗೆ ತೆರಳಿ, ಸೇನಾ ತರಬೇತಿಯ ಪಡೆದು ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಅಲ್ಲಿಯೇ ಆರ್ಮಿ ಏವಿಯೇಷನ್‌ನ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಪೈಲಟ್ ತರಬೇತಿಗೆ ಆಯ್ಕೆಯಾದರು. ಮೊದಲಿಗೆ 15ನೆಯ ಆರ್ಮರ್ಡ್ ರೆಜಿಮೆಂಟ್‌ಗೆ ಸೇರಿ, ಪಂಜಾಬಿನಲ್ಲಿ ಕಾರ್ಯನಿರ್ವಹಿಸಿದರು. ನಂತರ ಆರ್ಮಿ ಏವಿಯೇಷನ್‌ನ ಒಂದು ವರ್ಷದ ಪೈಲೆಟ್ ತರಬೇತಿ ಮುಗಿಸಿ, ಮೇ.22ರಂದು ನಾಸಿಕ್‌ನಲ್ಲಿ ನಡೆದ ಸಮಾರಂಭದಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ತೇರ್ಗಡೆ ಪ್ರಮಾಣ ಪತ್ರ ಪಡೆದರು.
ಈ ಬಾರಿ ಪೈಲೆಟ್ ತರಬೇತಿ ಪೂರ್ಣಗೊಳಿಸಿದ ಕರ್ನಾಟಕದ ಏಕೈಕ ಅಧಿಕಾರಿ ಎಂಬ ಹೆಗ್ಗಳಿಕೆ ಆದರ್ಶ್ ಅವರದ್ದು. ಒಂದು ವರ್ಷದ ಪೈಲಟ್ ತರಬೇತಿಯಲ್ಲಿ ನಿರಂತರವಾಗಿ ಥಿಯರಿ ಹಾಗೂ ಪ್ರಾಯೋಗಿಕ ತರಗತಿಗಳು ಮತ್ತು ಪರೀಕ್ಷೆಗಳಿದ್ದು, ಪ್ರತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿರುತ್ತದೆ.
ಬೈಂದೂರು ತಾಲ್ಲೂಕಿನ ಉಪ್ಪುಂದ ವೈದ್ಯರ ಮನೆಯ ಗೋಪಾಲ ವೈದ್ಯ ಮತ್ತು ಕಲ್ಪನಾ ಅವರ ಪುತ್ರನಾದ ಆದರ್ಶ ವೈದ್ಯ ಅವರದ್ದು, ಪತ್ನಿ ರಕ್ಷಿತಾ ಹಾಗೂ ಸಹೋದರಿ ಅಪೂರ್ವ ಅವರನ್ನೊಳಗೊಂಡ ಸುಂದರ ಕುಟುಂಬ.