Kundapra.com ಕುಂದಾಪ್ರ ಡಾಟ್ ಕಾಂ

ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ನಿಶ್ಚಿತ: ಬಿ. ವೈ. ವಿಜಯೇಂದ್ರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರಾಜ್ಯದಲ್ಲಿ ಆರು ಕ್ಷೇತ್ರಗಳಿಗೆ ವಿಧಾನಪರಿಷತ್ ಚುನಾವಣೆ ನಡೆಯುತ್ತಿದ್ದು, ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಡಾ. ಧನಂಜಯ ಸರ್ಜಿ, ಬೋಜೇಗೌಡ ಮೊದಲ ಪ್ರಾಶಸ್ತ್ಯದ ಮತದಲ್ಲೇ ಗೆಲ್ಲುತ್ತಾರೆಂಬ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ತಾಲೂಕಿನ ಕುಂಭಾಶಿಯ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಶ್ವರಪ್ಪ, ಧನಂಜಯ ಸರ್ಜಿ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಚರ್ಚೆ ಮಾಡಿದ್ದಾರೆ. ನಾನು ದೇವಸ್ಥಾನದ ಮುಂದೆ ನಿಂತು ಹೇಳುತ್ತಿದ್ದೇನೆ. ಅಭ್ಯರ್ಥಿ ಯಾರು ಎಂದು ಚರ್ಚೆ ಆದಾಗ ಈಶ್ವರಪ್ಪನವರೇ ಡಾ. ಸರ್ಜಿ ಅವರನ್ನು ಸೂಚಿಸಿದ್ದು ಡಾ. ಧನಂಜಯ ಸರ್ಜಿ ಸಜ್ಜನರಾಗಿದ್ದು ಅವರಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯ ಹೇಳಿದ್ದ ಈಶ್ವರಪ್ಪ ಹಿಂದೆ ಹೇಳಿದ್ದನ್ನು ಮರೆತಿದ್ದಾರೆ ಎಂದು ಭಾವಿಸುತ್ತೇನೆ ಎಂದರು.

ಬಿಜೆಪಿ ಒಟ್ಟಾಗಿ ಶ್ರಮ ಹಾಕುತ್ತಿದೆ. ಯಾವುದೇ ಗೊಂದಲ ಇಲ್ಲದೆ ನಮ್ಮ ಶಾಸಕರು, ನಾಯಕರು ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿಗಳನ್ನ ಗೆಲ್ಲಿಸುತ್ತದೆ ಎಂದ ವಿಜಯೇಂದ್ರ, ಜೂನ್ 4 ಲೋಕಸಭಾ ಚುನಾವಣೆ ಫಲಿತಾಂಶವಾಗಿದ್ದು, ಕಳೆದ ಬಾರಿಯಷ್ಟೇ ಅಥವಾ ಒಂದು ಸ್ಥಾನ ಹೆಚ್ಚು ಗೆಲ್ಲುತ್ತೇವೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕೈ ಹಿಡಿಯಲಿದೆ ಎಂದು ಮುಖ್ಯಮಂತ್ರಿಗಳು ಭ್ರಮೆಯಲ್ಲಿದ್ದಾರೆ. ಮುಂದೆ ಕಾಂಗ್ರೆಸ್ಸಿನವರಿಗೆ ದೊಡ್ಡ ನಿರಾಶೆ ಕಾದಿದೆ. ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದು ಇತಿಹಾಸ ಸೃಷ್ಟಿ ಮಾಡುತ್ತೇವೆ. ಪ್ರಜ್ಞಾವಂತ ಮತದಾರರು ಪ್ರಧಾನಿ ನರೇಂದ್ರ ಮೋದಿ ಕೈ ಹಿಡಿದು ಮತ್ತೆ ಪ್ರಧಾನಿಯಾಗಲು ಹಂಬಲಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಒಂದು ಲಕ್ಷ ರೂಪಾಯಿ ಘೋಷಣೆ ವಿಚಾರ, ಜನರನ್ನ ಮೂರ್ಖ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಹೆಚ್ಚು ದಿನ ಈ ಆಟಗಳು ನಡೆಯುವುದಿಲ್ಲ. ರಾಹುಲ್ ಗಾಂಧಿ ವ್ಯಕ್ತಿತ್ವ, ನಾಯಕತ್ವ ವನ್ನು ರಾಜ್ಯ ಮತ್ತು ದೇಶದ ಜನ ನೋಡಿದ್ದಾರೆ. ಯಾವುದೇ ಬೂಟಾಟಿಕೆ, ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು.

Exit mobile version