Kundapra.com ಕುಂದಾಪ್ರ ಡಾಟ್ ಕಾಂ

ವಿಧಾನ ಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ: ಮತದಾನದ ಬಗ್ಗೆ ಇಲ್ಲಿದೆ ಮಾಹಿತಿ

ಕುಂದಾಪ್ರ ಡಾಟ್ ಕಾಂ‌ ಮಾಹಿತಿ.
ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆ ಜೂನ್ 03 ರಂದು ಬೆಳಗ್ಗೆ 08 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಕೆ ಮಾಡುವುದಿಲ್ಲ. ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಗೆದ್ದ ಅಭ್ಯರ್ಥಿಯನ್ನು ಘೋಷಣೆ ಮಾಡುವುದರಿಂದ ಸರಿಯಾಗಿ ಮತದಾನ ಮಾಡಬೇಕು. ಇಲ್ಲವಾದಲ್ಲಿ ಮತ ಅಸಿಂಧುವಾಗುತ್ತದೆ. ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಅರ್ಹ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲಿದ್ದಾರೆ.

ಮತದಾರರ ಮತಗಟ್ಟೆಯ ಭಾಗ ಮತ್ತು ಕ್ರಮ ಸಂಖ್ಯೆ, ಹೆಸರು ಮತ್ತು ಮತದಾನ ಕೇಂದ್ರದ ಸ್ಥಳದ ಬಗ್ಗೆ ಮಾಹಿತಿ ಹೊಂದಿರುವ ಮತದಾರರ ಚೀಟಿಯನ್ನು ಒದಗಿಸಲಾಗಿದೆ. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ (ಎಪಿಕ್) ಅಥವಾ ಆಧಾರ್‍ಕಾರ್ಡ್, ಚಾಲನಾ ಪರವಾನಗಿ, ಪಾನ್ ಕಾರ್ಡ್, ರಾಜ್ಯ ಮತ್ತು ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು, ಸ್ಥಳೀಯ ಸಂಸ್ಥೆಗಳು ಅಥವಾ ಇತರ ಖಾಸಗಿ ಕೈಗಾರಿಕೆಗಳಿಂದ ಉದ್ಯೋಗಿಗಳಿಗೆ ನೀಡಲಾದ ಸೇವಾ ಗುರುತಿನ ಚೀಟಿ, ಎಂಪಿ, ಎಂಎಲ್‍ಎ, ಎಂಎಲ್ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು, ಸಂಬಂಧಪಟ್ಟ ಶಿಕ್ಷಕರ ಅಥವಾ ಪದವೀಧರರ ಕ್ಷೇತ್ರದ ಮತದಾರರು ನೇಮಕಗೊಂಡಿರುವ ಶಿಕ್ಷಣ ಸಂಸ್ಥೆಗಳು ನೀಡಿದ ಸೇವಾ ಗುರುತಿನ ಚೀಟಿ, ವಿಶ್ವವಿದ್ಯಾಲಯ ನೀಡಿದ ಪದವಿ ಮತ್ತು ಡಿಪ್ಲೋಮಾ ಪ್ರಮಾಣ ಪತ್ರದ ಮೂಲಪ್ರತಿ (ಭಾವಚಿತ್ರ ಹೊಂದಿದ್ದಲ್ಲಿ), ಮತ್ತು ಸಕ್ಷಮ ಪ್ರಾಧಿಕಾರದಿಂದ ನೀಡಿದ ದೈಹಿಕ ನ್ಯೂನತೆಯ ಪ್ರಮಾಣ ಪತ್ರದ ಮೂಲಪ್ರತಿ ತೋರಿಸಬೇಕು.

ಮತದಾನ ಕೇಂದ್ರದಲ್ಲಿ ಕಾರ್ಯವಿಧಾನ
ಮತಗಟ್ಟೆ ಕೇಂದ್ರಗಳ ಪ್ರವೇಶ ದ್ವಾರದಲ್ಲಿ ಮಾಹಿತಿ ಕೇಂದ್ರದಲ್ಲಿರುವ ಬಿ.ಎಲ್.ಓ.ಗೆ ಎಪಿಕ್ ಅಥವಾ ಇತರ ಅನುಮೋದಿತ ಫೋಟೋ ಗುರುತಿನ ಚೀಟಿಯೊಂದಿಗೆ, ಮತದಾರರಿಗೆ ನೀಡಲಾದ ಅಧಿಕೃತ ವೋಟರ್ ಸ್ಲಿಪ್ ಅನ್ನು ತೋರಿಸಬೇಕು. ಅವರು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ ಗುರುತಿಸುವ ಕಾರ್ಯ ಮಾಡುತ್ತಾರೆ.

ಮೊಬೈಲ್ ಫೋನ್, ಪೆನ್-ಪೆನ್ಸಿಲ್, ದ್ರವ, ಮ್ಯಾಚ್-ಬಾಕ್ಸ್ ಇತ್ಯಾದಿ ವಸ್ತುಗಳೊಂದಿಗೆ ಮತದಾರರು ಮತಗಟ್ಟೆಗೆ ಪ್ರವೇಶಿಸುವಂತಿಲ್ಲ. ಮೊದಲನೆ ಮತಗಟ್ಟೆ ಅಧಿಕಾರಿಯು ಮತದಾರರ ಪಟ್ಟಿಯಲ್ಲಿನ ಮತದಾರರ ಕ್ರಮ ಸಂಖ್ಯೆಯನ್ನು ಓದಿ, ಗುರುತನ್ನು ಖಚಿತಪಡಿಸಿಕೊಳ್ಳುವರು. ನಂತರ ಮತದಾರರ ಬಲ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚುತ್ತಾರೆ.

ಮತದಾರರು ತಮ್ಮ ಮತ ಚಲಾಯಿಸಲು ಸ್ವಂತ ಪೆನ್ ಅಥವಾ ಪೆನ್ಸಿಲ್ ಬಳಸುವಂತಿಲ್ಲ. ಮತದಾನ ಗುರುತಿಗಾಗಿ ಚುನಾವಣಾ ಆಯೋಗದಿಂದಲೇ ಮತಗಟ್ಟೆಯಲ್ಲಿ ಪೆನ್ ಒದಗಿಸಲಾಗುವುದು. ಹೀಗಾಗಿ ಸಹಿ ಮಾಡಲು ಪೆನ್ ಮತ್ತು ಮತಪತ್ರವನ್ನು ಗುರುತಿಸಲು ನೇರಳೆ ಬಣ್ಣದ ಸ್ಕೆಚ್ ಪೆನ್ ನೀಡಲಾಗುವುದು. ಮತಪತ್ರದ ಕೌಂಟರ್ ಫೈಲ್‌ನಲ್ಲಿ ಪ್ರತಿಯೊಬ್ಬ ಮತದಾರರು ಸಹಿಯನ್ನು ಹಾಕಬೇಕು. ನೀವು ಸಹಿಯನ್ನು ಹಾಕಲು ನಿರಾಕರಿಸಿದರೆ ನಿಮಗೆ ಮತಪತ್ರವನ್ನು ನೀಡಲಾಗುವುದಿಲ್ಲ. ಕೌಂಟರ್ ಫೈಲ್‌ನಲ್ಲಿ ನೀವು ಸಹಿ ಮಾಡಿದ ನಂತರ, ನಿಮಗೆ ಮತಪತ್ರವನ್ನು ನೀಡಲಾಗುವುದು.

ಮೂರನೇ ಮತಗಟ್ಟೆ ಅಧಿಕಾರಿಯು ಮತಪತ್ರವನ್ನು ತೆಗೆದುಕೊಂಡು ಮತಪತ್ರದ ಹಿಂಭಾಗದಲ್ಲಿ ಮೇಲಿನ ಬಲ ಮೂಲೆಯಲ್ಲಿನ ವಿಶೇಷ ಗುರುತು ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ ಅದನ್ನು ಮೊದಲು ಲಂಬವಾಗಿ ಮತ್ತು ನಂತರ ಅಡ್ಡಡ್ಡಲಾಗಿ ಎರಡು ಬಾರಿ ಮಡಚಿ ಮತದಾರರಿಗೆ ಹಿಂದಿರುಗಿಸುತ್ತಾರೆ. ಮತದಾರರು ತಮ್ಮ ಮತ ಪತ್ರವನ್ನು ವೋಟಿಂಗ್ ಕಂಪಾರ್ಟ್‍ಮೆಂಟ್ ಒಳಗೆ ಕೊಂಡೊಯ್ದು ಅಲ್ಲಿ ಸೂಕ್ತವಾಗಿ ಮತದಾನ ಮಾಡಿದ ನಂತರ ಅದನ್ನು ಮೊದಲಿನಂತೆ ಮಡಚಿ ಮತ ಪೆಟ್ಟಿಗೆಗೆ ಹಾಕಬೇಕು.

ನೇರಳೆ ಸ್ಕೆಚ್ ಪೆನ್ನನ್ನು ಅಧ್ಯಕ್ಷಾಧಿಕಾರಿಗೆ ಹಿಂತಿರುಗಿಸಿದ ನಂತರ ಮತದಾರರು ಮತದಾನ ಕೇಂದ್ರದಿಂದ ಹೊರಗೆ ತೆರಳಬೇಕು. ಮತಗಟ್ಟೆಯಿಂದ ಹೊರಗೆ ಹೋದ ನಂತರ ಬಿ.ಎಲ್.ಓ. ಅವರ ಹತ್ತಿರ ಇರುವ ಪೆಟ್ಟಿಗೆಯಲ್ಲಿ ನಿಮ್ಮ ಯಾವುದೇ ವಸ್ತುವನ್ನು ಇಟ್ಟಿದ್ದಲ್ಲಿ ಅದನ್ನು ಹಿಂತೆಗೆದುಕೊಳ್ಳಬೇಕು.

ಮತದಾನದ ವಿಧಾನ
ಮತದಾನಕ್ಕಾಗಿ, ಮತಗಟ್ಟೆ ಅಧಿಕಾರಿಯು ಒದಗಿಸಿದ ನೇರಳೆ ಸ್ಕೆಚ್ ಪೆನ್‍ಅನ್ನು ಮಾತ್ರ ಬಳಸಬೇಕು, ಬೇರೆ ಯಾವುದೇ ಲೇಖನ ಬಳಸಬಾರದು. ಮತದಾರರು ತಮ್ಮ ಮೊದಲ ಪ್ರಾಶಸ್ತ್ಯವಾಗಿ ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರಿನ ಎದುರು ಒದಗಿಸಲಾದ ‘ಪ್ರಾಶಸ್ತ್ಯ ಕ್ರಮ’ ಎಂದು ಗುರುತಿಸಲಾದ ಅಂಕಣದಲ್ಲಿ ‘1’ಅಂಕಿ ನಮೂದಿಸುವ ಮೂಲಕ ಮತ ಚಲಾಯಿಸಬೇಕು. ಈ ಅಂಕಿ ‘1’ ಅನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಎದುರು ಮಾತ್ರ ಬರೆಯಬೇಕು. ಒಟ್ಟು ಅಭ್ಯರ್ಥಿಗಳ ಸಂಖ್ಯೆಯಷ್ಟು ಪ್ರಾಶಸ್ತ್ಯವನ್ನು ಕ್ರಮವಾದ ಸಂಖ್ಯೆಯಲ್ಲಿ ಗುರುತಿಸಬಹುದು.

ಮತದಾರರು ಪ್ರಾಶಸ್ತ್ಯ ಕ್ರಮದಲ್ಲಿ ಅಂತಹ ಅಭ್ಯರ್ಥಿಗಳ ಹೆಸರುಗಳ ಎದುರು ‘ಪ್ರಾಶಸ್ತ್ಯದ ಕ್ರಮ’ ಎಂದು ಗುರುತಿಸಲಾದ ಕಲಂನಲ್ಲಿ, ನಂತರದ ಅಂಕಿಗಳು ಅಂದರೆ 2, 3, 4 ಇತ್ಯಾದಿಗಳನ್ನು ನಮೂದಿಸುವ ಮೂಲಕ ಉಳಿದ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯಗಳನ್ನು ಸೂಚಿಸಬಹುದು. ರೋಮನ್ ಸಂಖ್ಯೆ (I, II, III, IV) ರೂಪದಲ್ಲಿ ಅಥವಾ ಕನ್ನಡದಲ್ಲಿ (1, 2, 3, 4) ಗುರುತಿಸಬಹುದು.

ನಿಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬಾರದು ಮತ್ತು ಮತ ಪತ್ರದಲ್ಲಿ ನಿಮ್ಮ ಸಹಿ ಅಥವಾ ಕಿರು ಸಹಿ ಉಪನಾಮ ಇತ್ಯಾದಿಗಳನ್ನು ಹಾಕಬಾರದು. ಇವುಗಳು ನಿಮ್ಮ ಮತಪತ್ರವನ್ನು ಅಸಿಂಧುಗೊಳಿಸುತ್ತವೆ. ನಿಮ್ಮ ಪ್ರಾಶಸ್ತ್ಯವನ್ನು ಸೂಚಿಸಲು ನಿಮ್ಮ ಆಯ್ಕೆಯ ಅಭ್ಯರ್ಥಿಗಳ ಎದುರು ಯಾವುದೇ ಗುರುತನ್ನು ಹಾಕಬಾರದು.

ಮತದಾರರು ತಮ್ಮ ಮತ ಪತ್ರವನ್ನು ಮಾನ್ಯ ಮಾಡಲು, ಯಾವುದಾದರೂ ಒಂದು ಅಭ್ಯರ್ಥಿಯ ಎದುರು ಅಂಕಿ ‘1’ ಅನ್ನು ನಮೂದಿಸುವ ಮೂಲಕ ನಿಮ್ಮ ಮೊದಲ ಪ್ರಾಶಸ್ತ್ಯವನ್ನು ಸೂಚಿಸುವುದು ಅವಶ್ಯಕ. ಇತರ ಪ್ರಾಶಸ್ತ್ಯಗಳು ಐಚ್ಛಿಕವಾಗಿರುತ್ತದೆ.

ಯಾವ ಕಾರಣಗಳಿಗೆ ಮತಪತ್ರವು ಅಸಿಂಧುವಾಗುತ್ತದೆ ?
ಯಾವುದೇ ಅಭ್ಯರ್ಥಿಯ ಎದುರು 1ನೇ ಪ್ರಾಶಸ್ತ್ಯವನ್ನು ನಿಯಮಾನುಸಾರ ಗುರುತಿಸದಿರುವುದು. ಒಂದಕ್ಕಿಂತ ಹೆಚ್ಚಿನ ಅಭ್ಯರ್ಥಿಯ ಎದುರು 1ನೇ ಪ್ರಾಶಸ್ತ್ಯವನ್ನು ಗುರುತಿಸಿರುವುದು. 1ನೇ ಪ್ರಾಶಸ್ತ್ಯವನ್ನು ನಿಗದಿತ ಅಂಕಣದಲ್ಲಿ ಗುರುತಿಸದೆ ಇರುವುದರಿಂದ 1ನೇ ಪ್ರಾಶಸ್ತ್ಯವನ್ನು ಯಾವ ಅಭ್ಯರ್ಥಿಗೆ ನೀಡಲು ಉದ್ದೇಶಿಸಲಾಗಿದೆ ಎಂಬುದನ್ನು ನಿಖರವಾಗಿ ಗುರುತಿಸುವುದು ಅಸಾಧ್ಯವಾಗುವುದು.

ಅಂಕಿ 1 ಮತ್ತು 2, 3 ಇತ್ಯಾದಿ ಇತರ ಕೆಲವು ಅಂಕಿಗಳನ್ನು ಸಹ ಒಂದೇ ಅಭ್ಯರ್ಥಿಯ ಹೆಸರಿನ ಎದುರು ಗುರುತಿಸಿರುವುದು. ಪ್ರಾಶಸ್ತ್ಯವನ್ನು ಅಂಕಿಗಳ ಬದಲಿಗೆ ಪದಗಳಲ್ಲಿ ಸೂಚಿಸುವುದು. ಮತದಾರರನ್ನು ಗುರುತಿಸುವಂತಹ ಯಾವುದೇ ಗುರುತು ಅಥವಾ ಬರಹವಿರುವುದು. ನೇರಳೆ ಬಣ್ಣದ ಸ್ಕೆಚ್ ಪೆನ್ ಅನ್ನು ಹೊರತುಪಡಿಸಿ ಬೇರೆ ಲೇಖನಿಯನ್ನು ಬಳಸಿರುವುದು, ಇವು ಮತವನ್ನು ಅಮಾನ್ಯ ಮಾಡಲು ಕಾರಣವಾಗಲಿವೆ.

ಮತದಾನದ ಗೌಪ್ಯತೆಯನ್ನು ಕಾಯ್ದುಕೊಳ್ಳುವುದು
ಪ್ರಾಶಸ್ತ್ಯವನ್ನು ಗುರುತಿಸಿದ ನಂತರ ಮತಗಟ್ಟೆಯೊಳಗೆ ಅಥವಾ ಇನ್ಯಾವುದೇ ರೀತಿಯಲ್ಲಿ ನಿಮ್ಮ ಗುರುತು ಮಾಡಿದ ಮತ ಪತ್ರವನ್ನು ಪ್ರದರ್ಶಿಸುವ ಮೂಲಕ ಮತದಾರರು ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದರೆ ಅಥವಾ ಮತಗಟ್ಟೆ ಅಧಿಕಾರಿಯು ನಿಮಗೆ ಎಚ್ಚರಿಕೆ ನೀಡಿದ ನಂತರವೂ ನಿಗದಿತ ಮತದಾನ ವಿಧಾನವನ್ನು ಅನುಸರಿಸಲು ನಿರಾಕರಿಸಿದರೆ, ಮತ ಪತ್ರವನ್ನು ನಿಮ್ಮಿಂದ ಹಿಂಪಡೆಯಲಾಗುತ್ತದೆ ಮತ್ತು ಮತಪತ್ರವನ್ನು ಅಧ್ಯಕ್ಷಾಧಿಕಾರಿಯವರು ರದ್ದುಗೊಳಿಸುತ್ತಾರೆ.

ಮತ ಪತ್ರವನ್ನು ಹೊರತುಪಡಿಸಿ ಮತ ಪೆಟ್ಟಿಗೆಗೆ ಇನ್ನೇನ್ನಾದರೂ ಹಾಕುವುದು ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 136ರ ಅಡಿ ಚುನಾವಣಾ ಅಪರಾಧವಾಗಿರುತ್ತದೆ

Exit mobile version