Kundapra.com ಕುಂದಾಪ್ರ ಡಾಟ್ ಕಾಂ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರಗೆ ಭರ್ಜರಿ ಗೆಲುವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಅವರಿಗೆ ನಾಲ್ಕನೇ ಭಾರಿಗೆ ಭರ್ಜರಿ ಗೆಲುವು ದೊರೆತಿದೆ.

ಮಧ್ಯಾಹ್ನ 2.45 ಗಂಟೆಯ ವೇಳೆಗೆ ಬಿ.ವೈ. ರಾಘವೇಂದ್ರ ಅವರು 7,78,721 ಮತಗಳನ್ನು ಪಡೆದಿದ್ದರೇ, ಪ್ರತಿಸ್ಪರ್ಧಿ ಕಾಂಗ್ರೆಸ್‌ ಪಕ್ಷದ ಗೀತಾ ಶಿವರಾಜಕುಮಾರ್‌ ಅವರು 5,35,006  ಮತಗಳನ್ನು ಪಡೆದುಕೊಂಡಿದ್ದರು. ರಾಘವೇಂದ್ರ ಅವರು 2,43,715 ಮತಗಳ ಮುನ್ನಡೆ ಕಾಯ್ದುಕೊಂಡು ಗೆಲುವಿನ ಮಾಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.‌ ಈಶ್ವರಪ್ಪ ಅವರು 30,050  ಮತಗಳನ್ನಷ್ಟೇ ಪಡೆದು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್‌ ಕಛೇರಿಯಲ್ಲಿ ಗೆಲುವನ್ನು ಸಿಹಿ ಹಂಚಿ ಸಂಭ್ರಮಿಸಿದರು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಸೇರಿದಂತೆ ಬಿಜೆಪಿ ಜೆಡಿಎಸ್‌ ಶಾಸಕರು, ಪಕ್ಷದ ನಾಯಕರು ಜೊತೆಗಿದ್ದರು.

ಒಟ್ಟಾರೆ ಇಲ್ಲಿ23 ಅಭ್ಯರ್ಥಿಗಳಿದ್ದಾರೆ. ಕೆಎಸ್ ಈಶ್ವರಪ್ಪ ಜೊತೆಗೆ ಡಿಎಸ್ ಈಶ್ವರಪ್ಪ ಎಂಬ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿಯಿರುವುದು ವಿಶೇಷ. ಶಿವಮೊಗ್ಗವೂ ಸೇರಿದಂತೆ ಕರ್ನಾಟಕದ 14 ಕ್ಷೇತ್ರಗಳಿಗೆ ಮೇ 7ರಂದು ಚುನಾವಣೆ ನಡೆದಿತ್ತು. ಶಿವಮೊಗ್ಗ ಜಿಲ್ಲೆಯಲ್ಲೆ 78.33ರಷ್ಟು ಮತದಾನವಾಗಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದ್ದು ಅಂಚೆ ಮತಗಳ ಎಣಿಕೆಯಲ್ಲಿ ಬಿವೈ ರಾಘವೇಂದ್ರ ಅವರು ಮುನ್ನಡೆ ಸಾಧಿಸಿದ್ದರು.

ಲಭ್ಯ ಮಾಹಿತಿಯ ಪ್ರಕಾರ ಬಿವೈ ರಾಘವೇಂದ್ರ ಅವರು ಅಂತಿಮ ಸುತ್ತಿಗಿಂತಲೂ ಮುಂಚೆ ಗೀತಾ ಶಿವರಾಜಕುಮಾರ್ ಅವರ ವಿರುದ್ಧ 179691 ಮತಗಳ ಭಾರೀ ಮುನ್ನಡೆ ಸಾಧಿಸಿದ್ದರು. ಬಿ.ವೈ.ರಾಘವೇಂದ್ರ ಅವರು 600725 ಮತ, ಗೀ ತಾ ಶಿವರಾಜಕುಮಾರ್ 421034 ಮತ ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು 23257 ಮತಗಳನ್ನಷ್ಟೇ ಪಡೆದಿದ್ದರು.

ರಾಜ್ಯದ ಪ್ರಭಾವಿ ರಾಜಕಾರಣಿಗಳಲ್ಲೊಬ್ಬರಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ತವರು ಕ್ಷೇತ್ರವಾಗಿರುವ ಶಿವಮೊಗ್ಗದಲ್ಲಿ ಯಾವುದೇ ಚುನಾವಣೆಯಾದರೂ ಅಲ್ಲಿನ ಫಲಿತಾಂಶವನ್ನು ಇಡೀ ದೇಶ ಎದುರು ನೋಡುತ್ತಿರುತ್ತದೆ. ಜಿಲ್ಲೆಯ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳಾದ ಬಿವೈ ರಾಘವೇಂದ್ರ ಮತ್ತುಗೀತಾ ಶಿವರಾಜ್ ಕುಮಾರ್ ಅವರು ಮತ್ತೆ ಸ್ಪರ್ಧಾ ಕಣದಲ್ಲಿದ್ದರು. ಈ ಹಿಂದೆ ಸೋಲಿನ ರುಚಿ ಕಂಡಿದ್ದ ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿ ಈ ಬಾರಿ ಗೆಲುವು ಸಾಧಿಸುತ್ತಾರೆಯೇ ಎಂಬುದು ಕುತೂಹಲದ ಪ್ರಶ್ನೆಯಾಗಿತ್ತು

ಇವರಿಬ್ಬರ ನಡುವೆಯೇ ನೇರ ಹಣಾಹಣಿ ಎಂದು ಎಲ್ಲರೂ ಎಣಿಸುತ್ತಿರುವಾಗಲೇ ಬಿಎಸ್ ಯಡಿಯೂರಪ್ಪ ಮತ್ತವರ ಪುತ್ರರ ವಿರುದ್ಧ ಸಮರ ಸಾರಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ತೊಡೆ ತಟ್ಟಿರುವುದರಿಂದ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಕೂಡ ಇತ್ತು. ಈಶ್ವರಪ್ಪ ಅವರು ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದದ್ದೇ ಆದಲ್ಲಿ ಫಲಿತಾಂಶ ಏನು ಬೇಕಾದರೂ ಅಗಬಹುದು ಎಂದು ಹೇಳಲಾಗಿತ್ತು. ಆದರೆ ಮತದಾರ ಮಾತ್ರ ಬಿಜೆಪಿಗೆ ಒಲವು ತೋರಿಸಿದ್ದರಿಂದ ರಾಘವೇಂದ್ರ ಅವರು ಲಕ್ಷಾಂತರ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ

ಬಿಜೆಪಿಗೆ ಇಲ್ಲಿ ಯಡಿಯೂರಪ್ಪ ಅವರ ವರ್ಚಸ್ಸು ಮತ್ತು ಮೋದಿ ಅಲೆ ಎರಡೂ ಕೆಲಸ ಮಾಡಿದೆ. ಇಬ್ಬರ ಜಗಳದ ಲಾಭ ಪಡೆಯಲು ಸರಿಯಾದ ಸಮಯ ಎಂಬುದನ್ನು ಸರಿಯಾಗಿ ಅರ್ಥೈಸಿರುವ ಕಾಂಗ್ರೆಸ್ ಸಹ ಇಲ್ಲಿ ಗೆಲುವ ಸಾಧಿಸಲು ಅವಿರತ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್ ನ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಸಚಿವರಾಗಿರುವ ಸಹೋದರ ಮಧು ಬಂಗಾರಪ್ಪ ಅವರ ಬೆಂಬಲ ಇದ್ದರೂ ಕೆಲಸ ಮಾಡಲಿಲ್ಲ.

ಹಿಂದಿನ ಫಲಿತಾಂಶಗಳು:
2009ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ಬಳಿಕ ಈ ಕ್ಷೇತ್ರವನ್ನು ಬಿಜೆಪಿ ಯಾವ ಚುನಾವಣೆಯಲ್ಲಿ ಬಿಟ್ಟುಕೊಟ್ಟಿಲ್ಲ. ನಡೆದಿರುವ 4 ಚುನಾವಣೆಯಲ್ಲಿ 3 ಬಾರಿ ಬಿವೈ ರಾಘವೇಂದ್ರ ಜಯ ಗಳಿಸಿದ್ದರೆ, 1 ಬಾರಿ ಯಡಿಯೂರಪ್ಪ ಅವರು ಜಯಭೇರಿ ಬಾರಿಸಿದ್ದಾರೆ. 2009ರಲ್ಲಿ ಬಿಜೆಪಿಯಿಂದ ಬಿವೈ ರಾಘವೇಂದ್ರ ಅವರು 482783 ಮತಗಳನ್ನು ಪಡೆದು ಕಾಂಗ್ರೆಸ್ ಪ್ರಬಲ ನಾಯಕ ಎಸ್ ಬಂಗಾರಪ್ಪ ಅವರನ್ನು 52893 ಮತಗಳ ಭಾರೀ ಅಂತರದಿಂದ ಸೋಲಿಸಿದರು. ಬಂಗಾರಪ್ಪನವರು 429890 ಮತಗಳನ್ನು ಪಡೆದರೂ ಮೊದಲ ಬಾರಿಗೆ ಕಣಕ್ಕಿಳಿದ ರಾಘವೇಂದ್ರ ಎದುರು ಗೆಲುವ ಸಾಧಿಸಲು ಮಾತ್ರ ಸಾಧ್ಯವಾಗಲಿಲ್ಲ.

2014ರಲ್ಲಿ ಕೆಜೆಪಿಯಿಂದ ಬಿಜೆಪಿ ಸೇರಿದ್ದ ಬಿಎಸ್ ಯಡಿಯೂರಪ್ಪಅವರು ಕಾಂಗ್ರೆಸ್ ನ ಮಂಜುನಾಥ ಭಂಡಾರಿ ಅವರನ್ನು 363305 ಮತಗಳ ಭಾರೀ ಅಂತರದಿಂದ ಸೋಲಿಸಿದರು. ಯಡಿಯೂರಪ್ಪ ಅವರು 606216 ಮತಗಳನ್ನು ಪಡೆದರೆ, ಮಂಜುನಾಥ ಭಂಡಾರಿ ಅವರು 242911 ಮತಗಳನ್ನಷ್ಟೇ ಗಳಿಸಲು ಸಫಲರಾದರು. ಆ ಬಾರಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಗೀತಾ ಶಿವರಾಜ್ ಕುಮಾರ್ ಅರು ಅವರು 240636 ಮತಗಳನ್ನು ಪಡೆದು 3ನೇ ಸ್ಥಾನಿಯಾದರು.

2018ರಲ್ಲಿ ಬಿಎಸ್ ಯಡಿಯೂರಪ್ಪ ಅವರು ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯಿತು. ಈ ಬಾರಿ ಮಧು ಬಿವೈ ರಾಘವೇಂದ್ರ ಅವರು ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಅವರ ವಿರುದ್ಧ 52148 ಮತಗಳ ಅಂತರದಿಂದ ಜಯ ಗಳಿಸಿದರು. ರಾಘವೇಂದ್ರ ಅವರು 543306 ಮತಗಳನ್ನು ಗಳಿಸಿದರೆ, ಮಧು ಬಂಗಾರಪ್ಪ ಅವರು 491158 ಮತಗಳನ್ನು ಗಳಿಸಿದರು.

2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎವೈ ರಾಘವೇಂದ್ರ ಅವರು ಮೈತ್ರಿ ಅಭ್ಯರ್ಥಿಯಾಗಿದ್ದ ಜೆಡಿಎಸ್ ನ ಮಧು ಬಂಗಾರಪ್ಪ ಅವರನ್ನು 223360 ಮತಗಳ ಭಾರೀ ಅಂತರದಿಂದ ಪರಾಭವಗೊಳಿಸಿದ್ದರು. ರಾಘವೇಂದ್ರ ಅವರಿಗೆ 729872 ಮತಗಳು ದೊರಕಿದರೆ, ಮಧು ಬಂಗಾರಪ್ಪ ಅವರು 506512 ಮತಗಳನ್ನಷ್ಟೇ ಪಡೆಯಲು ಸಫಲರಾಗಿದ್ದರು.

ಇನ್ನುಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ ಲೋಕಸಭಾ ಚುನಾವಣೆಗಳನ್ನು ಗಮನಿಸಿದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ಅಚ್ಚರಿಯ ಫಲಿತಾಂಶಗಳನ್ನು ನೀಡಿದೆ. ಸದ್ಯ ಇದು ಬಿಜೆಪಿಯ ಭದ್ರಕೋಟೆಯಾಗಿದ್ದರೂ ಅದಕ್ಕೂ ಮೊದಲು ಇಲ್ಲಿ ಬಹಳ ಪಕ್ಷಗಳು ಗೆಲುವಿನ ಕೇಕೆ ಹಾಕಿವೆ. 1952, 1957ರಲ್ಲಿ ಕಾಂಗ್ರೆಸ್ ನ ಕೆಜಿ ಒಡೆಯರ್ ಮತ್ತು 1962ರಲ್ಲಿ ಎಸ್ ವಿ ಕೃಷ್ಣಮೂರ್ತಿ ರಾವ್ ಗೆಲುವು ಸಾಧಿಸಿದ್ದರು. 1967ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆಎಚ್ ಪಟೇಲ್ ಅವರು ಸಂಯುಕ್ತ ಸಮಾಜವಾದಿ ಪಕ್ಷದಿಂದ ಗೆಲ್ಲುವ ಮೂಲಕ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಿದ್ದರು.

1971ರಲ್ಲಿ ಮರಳಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ಎಳೆದುಕೊಂಡ ಕಾಂಗ್ರೆಸ್ ನಿರಂತರ 6 ಚುನಾವಣೆಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. 1971ರಲ್ಲಿ ಟಿವಿ ಚಂದ್ರಶೇಖರಪ್ಪ, 1977ರಲ್ಲಿ ಬದರಿನಾರಾಯಣ, 1980ರಲ್ಲಿ ಎಸ್ ಟಿ ಖಾದ್ರಿ, 1984 ಮತ್ತು 1989ರಲ್ಲಿ ಟಿವಿ ಚಂದ್ರಶೇಖರಪ್ಪ, 1991ರಲ್ಲಿ ಕೆಜಿ ಶಿವಪ್ಪ ಗೆದ್ದರು.

1996ರಲ್ಲಿ ಕಾಂಗ್ರೆಸ್ ನಿಂದ ಹೊರಬಂದು ಕರ್ನಾಟಕ ವಿಕಾಸ ಪಕ್ಷ ಸ್ಥಾಪಿಸಿದ್ದ ಮಾಜಿ ಸಿಎಂ ಎಸ್ ಬಂಗಾರಪ್ಪ ಅವರು ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. 1998ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಆಯನೂರು ಮಂಜುನಾಥ್ ಕಮಲ ಪಕ್ಷಕ್ಕೆ ಇಲ್ಲಿ ಮೊದಲ ಗೆಲುವು ತಂದಿತ್ತರು. ಆದರೆೆ ಆ ನಂತರದ 3 ಚುನಾವಣೆಗಳಲ್ಲಿ ಬಂಗಾರಪ್ಪ ಅವರು 3 ಭಿನ್ನ ಪಕ್ಷಗಳಿಂದ ಗೆಲುವು ಸಾಧಿಸಿದರು. 1999ರಲ್ಲಿ ಕಾಂಗ್ರೆಸ್ ನಿಂದ, 2004ರಲ್ಲಿ ಬಿಜೆಪಿ ಮತ್ತು 2005ರಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದರು. 2009ರ ಚುನಾವಣೆ ಬಳಿಕ ಇಲ್ಲಿ ಬಿಜೆಪಿ ಬಿಟ್ಟು ಮತ್ಯಾವ ಪಕ್ಷವೂ ಗೆದ್ದಿಲ್ಲ.

Exit mobile version