Kundapra.com ಕುಂದಾಪ್ರ ಡಾಟ್ ಕಾಂ

ಉಪನ್ಯಾಸಕರು ಗಣಕಯಂತ್ರ ವಿಷಯಗಳನ್ನು ಮನದಟ್ಟು ಮಾಡಲು ಸಮರ್ಥರಾಗಬೇಕು : ಮಾರುತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
“ಪ್ರಥಮ ಪಿಯುಸಿ ಗಣಕವಿಜ್ಞಾನ ಪಠ್ಯಕ್ರಮ ಬದಲಾವಣೆಯಾದಾಗ ಬರುವ ಮೊದಲ ಹಂತ ಅಂದರೆ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವಿಷಯ ಮನದಟ್ಟು ಮಾಡಲು ಸಮರ್ಥರಾಗಬೇಕು ತಮ್ಮ ವೃತ್ತಿಯಲ್ಲಿ ಇನ್ನೂ ಪರಿಷ್ಕೃತಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹಾಗೂ ಉತ್ತಮ ಅಂಕಗಳಿಸುವಲ್ಲಿ ಪೂರಕ ಶಕ್ತಿಯಾಗಬೇಕು“ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿರವರು ತಿಳಿಸಿದರು.

ಉಡುಪಿ ಜಿಲ್ಲಾ ಗಣಕವಿಜ್ಞಾನ ಉಪನ್ಯಾಸಕರ ಸಂಘದ ವತಿಯಿಂದ  ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲ̧ಯ, ಬಂಟಕಲ್‌ ಇಲ್ಲಿ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತುಗಳನ್ನಾಡಿದರು.

ಉಡುಪಿ ಜಿಲ್ಲಾ ಗಣಕವಿಜ್ಞಾನ ಉಪನ್ಯಾಸಕರಿಗೆ “ಪೈಥಾನ್‌ ಪ್ರೋಗ್ರಾಂಮಿಂಗ್‌” ಸವಿವರವಾಗಿ ಪ್ರಾಯೋಗಿಕ ತರಗತಿ ಸಮೇತ ಕಾರ್ಯಗಾರವನ್ನು ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕವಿಜ್ಞಾನ ವಿಭಾಗದ ಉಪನ್ಯಾಸಕರಾದ ರಂಜನ್‌, ಗುರುಪ್ರಸಾದ್‌ ಹಾಗೂ ಯಶಸ್ವಿನಿ ನಡೆಸಿಕೊಟ್ಟು ಸೂಕ್ತ ಮಾರ್ಗದರ್ಶನ ನೀಡಿದರು. ಹಿರಿಯ ಉಪನ್ಯಾಸಕಿ ಆನಂದ ತೀರ್ಥ ಪ.ಪೂ ಕಾಲೇಜಿನ ಉಪಪ್ರಾಂಶುಪಾಲರಾದ ಕಮಲಾಕ್ಷಿ ಪ್ರಕಾಶ್‌ ಮಾತುಗಳನ್ನಾಡುತ್ತಾ, “ಎಲ್ಲಾ ಉಪನ್ಯಾಸಕರು ಒಂದೇ ಸೂರಿನಡಿಯಲ್ಲಿ ಪಠ್ಯಕ್ರಮ ಬದಲಾವಣೆಗೆ ಸೂಕ್ತವಾಗಿ ಹೊಂದಿಕೊಂಡು ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದ ಜ್ಞಾನ ಒದಗಿಸುವ ಪ್ರಯತ್ನ ಮಾಡಬೇಕು” ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿಕೊಂಡಿರುವ ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್‌  “ಉಡುಪಿ ಜಿಲ್ಲೆಯ ಎಲ್ಲಾ ಗಣಕ ವಿಜ್ಞಾನ ಉಪನ್ಯಾಸಕರು ನಮ್ಮ ದೇಶ ಗಣಕೀಕೃತ ದೇಶವಾಗಲು ರಾಯಭಾರಿಗಳು. ನಮ್ಮ ವಿದ್ಯಾರ್ಥಿಗಳಿಗೆ ಗಣಕವಿಜ್ಞಾನ ಸರಿಯಾಗಿ ತಿಳಿಸಿಕೊಟ್ಟರೆ ನಮ್ಮ ದೇಶ ಗಣಕೀಕೃತದಲ್ಲಿ ಮತ್ತೊಂದು ಹೆಜ್ಜೆ ಇರಿಸಿದಂತೆ” ಎಂದು ಪ್ರೋತ್ಸಾಹದ ನುಡಿಗಳನ್ನು ಆಡಿದರು.

ಈ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷರನ್ನಾಗಿ ಕ್ರಿಯೇಟಿವ್‌ ಪ.ಪೂ ಕಾಲೇಜು, ಕಾರ್ಕಳ ದ ಗಣಕವಿಜ್ಞಾನ ಉಪನ್ಯಾಸಕರಾದ ಜ್ಞಾನೇಶ್‌ ಕೋಟ್ಯಾನ್‌ ರವರನ್ನು ನೇಮಿಸಲಾಯಿತು. ಉಡುಪಿಯ ವಿದ್ಯೋದಯ ಪ.ಪೂ ಕಾಲೇಜು ಕಾರ್ಯದರ್ಶಿಯಾಗಿ  ಶಕುಂತಲಾ ರಾಜೇಶ್‌, ಖಜಾಂಚಿಯಾಗಿ ಬಿನು ಜಯಚಂದ್ರ ಪಾಲನ್‌ ಸೆಂಟ್‌ ಮೇರಿಸ್‌ ಕಾಂಪೋಸಿಟ್‌ ಪ.ಪೂ ಕಾಲೇಜು ಕುಂದಾಪುರ ಇವರುಗಳನ್ನು ನೇಮಿಸಲಾಯಿತು.  

ಕಾರ್ಯಕ್ರಮವನ್ನು ನಿಕಟಪೂರ್ವ ಅಧ್ಯಕ್ಷರಾದ ರಾಮ ನಾಯ್ಕ ಸ್ವಾಗತಿಸಿ, ದಿವ್ಯ ಧನ್ಯವಾದವಿತ್ತು, ಗಾಯತ್ರಿ ನಿರೂಪಿಸಿದರು.

Exit mobile version