Kundapra.com ಕುಂದಾಪ್ರ ಡಾಟ್ ಕಾಂ

ಪರಿಷತ್‌ ಚುನಾವಣೆ: ಎಸ್.ಎಲ್.‌ ಬೋಜೇಗೌಡಗೆ ಗೆಲುವು, ಡಾ. ಧನಂಜಯ ಸರ್ಜಿಗೆ ಮುನ್ನಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ: ನೈರುತ್ಯು
ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನಡೆಯುತ್ತಿದ್ದು, ಶಿಕ್ಷಕರ ಕ್ಷೇತ್ರದ ಜೆಡಿಎಸ್‌ ಬಿಜೆಪಿ ಮೈತ್ರಿ ಅಭ್ಯರ್ಥಿ ಎಸ್.‌ ಎಲ್.‌ ಭೋಜೇಗೌಡ 5,267 ಮತಗಳಿಂದ ಜಯ ಗಳಿಸಿದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲೂ ಬಿಜೆಪಿ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಭೋಜೇಗೌಡ ಅವರು ಒಟ್ಟು 9,829 ಮತಗಳನ್ನು ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಡಾ. ಕೆಕೆ ಮಂಜುನಾಥ್‌ ವಿರುದ್ಧ 5,267 ಮತಗಳ ಅಂತರದಿಂದ ಗೆದ್ದು 2ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ 4,562 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು.

ನೈಋುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಜೆಡಿಎಸ್‌ನ ಎಸ್‌ಎಲ್‌ ಭೋಜೇಗೌಡ ಮೊದಲ ಪ್ರಾಶಸ್ತ್ಯದಲ್ಲೇ 5,267 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಸತತ 2ನೇ ಬಾರಿಗೆ ವಿಧಾನ ಪರಿಷತ್‌ ಪ್ರವೇಶಿಸಿದರು.

2018ರ ಚುನಾವಣೆಯಲ್ಲಿ ಭೋಜೇಗೌಡರು ಅಂತಿಮ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಎಂಎಲ್‌ಸಿ ಗಣೇಶ್‌ ಕಾರ್ಣಿಕ್‌ ವಿರುದ್ಧ ಜಯಗಳಿಸಿದರೆ, ಆಗಲೂ ಕಾಂಗ್ರೆಸ್‌ನಿಂದಲೇ ಕಣಕ್ಕಿಳಿದಿದ್ದ ಕೆಕೆ ಮಂಜುನಾಥ ಕುಮಾರ್‌ 3ನೇ ಸ್ಥಾನಕ್ಕೆ ಕುಸಿದಿದ್ದರು.

ಕಳೆದ ಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದ ಭೋಜೇಗೌಡರು ಈ ಬಾರಿ ಅದೇ ಬಿಜೆಪಿಯ ಬೆಂಬಲದಿಂದಾಗಿ ಮೊದಲ ಪ್ರಾಶಸ್ತ್ಯದಲ್ಲೇ ಸುಲಭವಾಗಿ ಜಯಗಳಿಸಿದರು. ಮೂರು ಸುತ್ತುಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಲ್ಲಿ 1,642, 2ನೇ ಸುತ್ತಿನಲ್ಲಿ 3,069 ಮತ್ತು 3ನೇ ಸುತ್ತಿನಲ್ಲಿ 2,198 ಮತಗಳಿಂದ ಮುನ್ನಡೆ ಸಾಧಿಸಿದ್ದರು.

ಕಳೆದ ಚುನಾವಣೆಯಲ್ಲಿ ಗಣೇಶ್‌ ಕಾರ್ಣಿಕ್‌ ವಿರುದ್ಧ ಶಿಕ್ಷಕರ ಅಸಮಾಧಾನ ಭೋಜೇಗೌಡರಿಗೆ ವರವಾಗಿ ಪರಿಣಮಿಸಿತ್ತು. ಹೀಗಾಗಿ ಪ್ರಾಶಸ್ತ್ಯದ ಮತಗಳ ಕಡೇ ಸುತ್ತಿನಲ್ಲಿ ಜಯಗಳಿಸಿದ್ದರು. ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಅವರಿಗೆ ಚುನಾವಣೆ ನಡೆಸಲು ಸುಲಭವಾಯಿತು.

ಮಲೆನಾಡು ಮತ್ತು ಕರಾವಳಿಯಲ್ಲಿ ಜೆಡಿಎಸ್‌ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇಡೀ ನೈಋುತ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್‌ನ ಕೇವಲ ಒಬ್ಬರು ಶಾಸಕರಿದ್ದಾರೆ. ಇದರ ಮಧ್ಯೆ ಕಡೂರಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಹಿರಂಗವಾಗಿಯೇ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇವೆಲ್ಲದರ ಹೊರತಾಗಿ ಬಿಜೆಪಿಯ ಮತಗಳು ಭೋಜೇಗೌಡರ ಕೈ ಹಿಡಿದು ಸತತ ಎರಡನೇ ಬಾರಿ ವಿಧಾನ ಪರಿಷತ್‌ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು.

ಭರವಸೆ ಮೂಡಿಸಿದ್ದ ಡಾ. ಅರುಣ್‌ ಹೊಸಕೊಪ್ಪ ಅವರು 1,185 ಮತಗಳೊಂದಿಗೆ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಚುನಾವಣೆಯಲ್ಲಿ 23,402 ಮತದಾರರ ಪೈಕಿ 19,479 ಮತದಾರರು ಹಕ್ಕು ಚಲಾಯಿಸಿದ್ದರು. ಕಣದಲ್ಲಿಎಂಟು ಅಭ್ಯರ್ಥಿಗಳಿದ್ದರು.

ಶಿಕ್ಷಕರಿಂದ 821 ಮತ ತಿರಸ್ಕೃತ
ಮಕ್ಕಳ ಭವಿಷ್ಯವನ್ನು ರೂಪಿಸುವಂತಹ ಶಿಕ್ಷಕ, ಉಪನ್ಯಾಸಕರು, ಪ್ರಾಧ್ಯಾಪಕರೇ ಮತದಾರರಾದ ಶಿಕ್ಷಕರ ಕ್ಷೇತ್ರದಲ್ಲಿ 821 ಮತಗಳು ತಿರಸ್ಕೃತಗೊಂಡಿವೆ. ಅಂದರೆ ಚಲಾವಣೆಯಾದ 19,479 ಮತಗಳಲ್ಲಿ 18,658 ಮತಗಳು ಸಿಂಧುವಾಗಿವೆ. ಕಳೆದ ಚುನಾವಣೆಯಲ್ಲಿ 733 ಮತಗಳು ತಿರಸ್ಕೃತಗೊಂಡಿದ್ದವು.

ಇಲ್ಲಿ ಪ್ರಾಶಸ್ತ್ಯದ ಆಧಾರದ ಮೇಲೆ ಮತದಾನ ನಡೆಯುತ್ತದೆ. ಮತದಾರರು ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಒಂದು ಮತ ಚಲಾಯಿಸಬಹುದು. ಇಲ್ಲವೆ ಎಲ್ಲರಿಗೂ ಪ್ರಾಶಸ್ತ್ಯದ ಆಧಾರದ ಮೇಲೆ ಅಂದರೆ 1, 2, 3, ಸಂಖ್ಯೆಯನ್ನು ದಾಖಲಿಸುವ ಮೂಲಕ ಚಲಾಯಿಸಬಹುದು. ಇದು ಬಿಟ್ಟು ಬೇರೆ ಯಾವುದೇ ರೀತಿಯ ಗುರುತು ಹಾಕಿದರೂ ತಿರಸ್ಕೃತಗೊಳ್ಳುತ್ತದೆ. ಇದರ ಬಗ್ಗೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳು ತಮ್ಮ ಕರಪತ್ರದಲ್ಲಿ ನಮೂದಿಸಿದ್ದಾರೆ. ಅಲ್ಲದೆ ಪ್ರಚಾರದ ಸಂದರ್ಭದಲ್ಲೂ ಹೇಗೆ ಮತ ಚಲಾಯಿಸಬೇಕೆಂಬುದನ್ನು ಬಹುತೇಕ ಅಭ್ಯರ್ಥಿಗಳು ತೋರಿಸಿಕೊಟ್ಟಿದ್ದರು.

ಹೀಗಿದ್ದರೂ ಮತದಾರ ಅಧ್ಯಾಪಕರು ತಮ್ಮ ದಡ್ಡತನವನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇದ್ದಾರೆ. ವಿಶೇಷವೆಂದರೆ ಚುನಾವಣೆಯಿಂದ ಚುನಾವಣೆಗೆ ಕಡಿಮೆಯಾಗಬೇಕಾದ ತಿರಸ್ಕೃತ ಮತಗಳು ಹೆಚ್ಚಾಗುತ್ತಿವೆ.

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಡಾ. ಧನಂಜಯ ಸರ್ಜಿ ಮುನ್ನಡೆ:
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಮೊದಲ ಸುತ್ತಿನಿಂದಲೇ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು ಮುನ್ನಡೆ ಸಾಧಿಸಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರ 3ನೇ ಸುತ್ತಿನ ಮತ ಎಣಿಕೆ ಮಕ್ತಾಯಗೊಂಡಿದೆ.

ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ರಾತ್ರಿ 10ರ ಹೊತ್ತಿಗೆ ಮೂರನೇ ಸುತ್ತಿನ ಎಣಿಕೆ ಮುಗಿದಿದೆ. ಬಿಜೆಪಿ-ಜೆಡಿಎಸ್‌ ಅಭ್ಯರ್ಥಿ ಡಾ. ಧನಂಜಯ ಸರ್ಜಿ 22,655 ಮತಗಳನ್ನು ಪಡೆದು 14 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್‌ನ ಆಯನೂರು ಮಂಜುನಾಥ್‌ 8,238 ಮತ್ತು ಪಕ್ಷೇತರ (ಬಿಜೆಪಿ ಬಂಡಾಯ) ಅಭ್ಯರ್ಥಿ ಕೆ ರಘುಪತಿ ಭಟ್‌ಗೆ 5,833 ಮತ ದೊರಕಿದೆ. ಒಟ್ಟು 85,089 ಮತಗಳ ಪೈಕಿ 66,529 ಚಲಾವಣೆಗೊಂಡಿವೆ. ಕಣದಲ್ಲಿ ಒಟ್ಟು 10 ಅಭ್ಯರ್ಥಿಗಳು ಇದ್ದಾರೆ.

Exit mobile version