Kundapra.com ಕುಂದಾಪ್ರ ಡಾಟ್ ಕಾಂ

ಮಯ್ಯಾಡಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಅರಣ್ಯಭೂಮಿಯ ಒತ್ತುವರಿ, ಅನಿಯಂತ್ರಿತ ವಾಹನ ಬಳಕೆ, ಪ್ಲಾಸ್ಟಿಕ್ ಮತ್ತು ರಾಸಾಯನಿಕ ತ್ಯಾಜ್ಯ ವಸ್ತುಗಳಿಂದ ಪರಿಸರವನ್ನು ಮಲೀನಗೊಳಿಸುವ ಕಾರ್ಯ ನಿತ್ಯ ನಿರಾತಂಕ ಎಲ್ಲೆಡೆಯೂ ನಡೆಯುತ್ತಿದೆ. ಅಪರಿಮಿತ ತ್ಯಾಜ್ಯಗಳಿಂದ ನಮ್ಮ ಪರಿಸರ ಕೆಟ್ಟು ಹೋಗುತ್ತಿದ್ದರೂ ನಾವು ಮಾತ್ರ ಇನ್ನೂ ಅಪೇಕ್ಷಿತ ಮಟ್ಟದಲ್ಲಿ ಈ ಕುರಿತು ಜಾಗರೂಕರಾಗಿಲ್ಲ ಜತೆಗೆ ಸಮಸ್ಯೆಯ ಗಂಭೀರತೆಯನ್ನೂ ಅರಿತಿಲ್ಲ ಎಂದು ಯುವ ಉದ್ಯಮಿ ಅನುದೀಪ್ ಹೆಗ್ದೆ ಹೇಳಿದರು.

ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪರಿಸರದ ಕುರಿತು ಉಪನ್ಯಾಸ ನೀಡಿದರು. 

ಕ್ಷೇತ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಕೊಡಮಾಡಿದ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಿ ಮಾತನಾಡಿದ ಲಾವಣ್ಯ ಅಧ್ಯಕ್ಷ ನರಸಿಂಹ ಬಿ. ನಾಯಕ್, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ತರುವುದೇ ಶಿಕ್ಷಣ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಶಿಕ್ಷಣದ ಉದ್ದೇಶ ಬಹುಮುಖ ವ್ಯಕ್ತಿತ್ವದ ವಿಕಸನ. ಉತ್ತಮ ಶಿಕ್ಷಣ ದೊರೆತಾಗ ಮಾತ್ರ ವ್ಯಕ್ತಿ ಉತ್ತಮ ನಾಗರಿಕನಾಗಿ ಬದುಕಬಲ್ಲ. ಸ್ವತಂತ್ರವಾಗಿ ಯೋಚಿಸಬಲ್ಲ. ದೇಶ, ಸಮಾಜಕ್ಕೆ ಆಸ್ತಿಯಾಗಬಲ್ಲ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಸುಭೋಧ್ ಹಾರ್ವೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ರಾಜು ಎಸ್. ಸ್ವಾಗತಿಸಿ ಪ್ರಾಸ್ತಾವಿಸಿದರು.  ಶಿಕ್ಷಕಿಯರಾದ ಸವಿತಾ ನಿರೂಪಿಸಿ, ಬೀನಾ ಪಿ. ಜೆ. ವಂದಿಸಿದರು. ನಂತರ ಪರಿಸರಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

Exit mobile version