Site icon Kundapra.com ಕುಂದಾಪ್ರ ಡಾಟ್ ಕಾಂ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ: ನೊಂದಣಿಗೆ ಅರ್ಜಿ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಮಳೆಯಾಶ್ರಿತ ಭತ್ತವನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ)   ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಾಗೂ ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ 63,750 ರೂ. ಗಳಂತೆ ವಿಮಾ ಕಂತಿನ ದರವನ್ನು ಪ್ರತಿ ಹೆಕ್ಟೇರ್‌ಗೆ 1275 ರೂ. ಗಳಂತೆ ನಿಗಧಿಪಡಿಸಿದ್ದು, ನೋಂದಣಿಗಾಗಿ ಅಧಿಸೂಚಿಸಲಾಗಿರುತ್ತದೆ.

ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆ ದಿನವಾಗಿರುತ್ತದೆ. ಬೆಳೆ ಸಾಲ ಪಡೆಯದ ರೈತರು ಪಹಣಿ ಪತ್ರ, ಖಾತೆ ಪಾಸ್ ಪುಸ್ತಕ/ಬ್ಯಾಂಕ್ ಪಾಸ್ ಪುಸ್ತಕ, ಕಂದಾಯ ರಸೀದಿ ಮತ್ತು ಆಧಾರ್ ಸಂಖ್ಯೆಗಳನ್ನು ಒದಗಿಸಿ ವಾಣಿಜ್ಯ ಬ್ಯಾಂಕ್‌ಗಳು ಅಥವಾ ಗ್ರಾಮೀಣ ಮಟ್ಟದ ವ್ಯವಸಾಯ ಸೇವಾ ಸಹಕಾರ ಸಂಘಗಳು, ಸಾರ್ವಜನಿಕ ಸೇವಾ ಕೇಂದ್ರ, ಗ್ರಾಮ ಒನ್ ಮತ್ತು ವಿಮಾ ಸಂಸ್ಥೆಗಳನ್ನು ಸಂಪರ್ಕಿಸಿ, ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಅಧಿಸೂಚಿತ ಘಟಕದಲ್ಲಿ ಬೆಳೆ ವಿಮಾ ಯೋಜನೆಯಿಂದ ರೈತರಿಗಾಗುವ ಪ್ರಯೋಜನಗಳು: ಹವಾಮಾನ ವೈಪರೀತ್ಯಗಳಾದ ಹೆಚ್ಚಿನ ಮಳೆ, ನೆರೆ/ಪ್ರವಾಹದಿಂದ ಬೆಳೆ ಮುಳುಗಡೆ, ದೀರ್ಘಕಾಲ ತೇವಾಂಶ ಕೊರತೆ, ತೀವ್ರ ಬರಗಾಲ ಮುಂತಾದವುಗಳಿಂದ ಬಿತ್ತನೆಯಾದ ಒಂದು ತಿಂಗಳಿನಿಂದ ಕಟಾವಿನ 15 ದಿನ ಪೂರ್ವದವರೆಗಿನ ಬೆಳೆಯಲ್ಲಿ ಬೆಳೆ ನಷ್ಟವಾಗಿ ನಿರೀಕ್ಷಿತ ಇಳುವರಿಯು, ಸಾಮಾನ್ಯ ಇಳುವರಿಯ ಶೇ.50 ಕ್ಕಿಂತ ಕಡಿಮೆ ಇದ್ದಲ್ಲಿ ಅಥವಾ ಬೆಳೆ ನಷ್ಟ ಕಂಡುಬಂದಲ್ಲಿ ವಿಮೆ ಮಾಡಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಹಣ ಮುಂಚಿತವಾಗಿ ದೊರೆಯಲಿದೆ. ಬೆಳೆ ಕಟಾವಿನ ವಾಸ್ತವಿಕ ಇಳುವರಿ ಆಧಾರದ ಮೇಲೆ ಅಂತಿಮ ಬೆಳೆ ನಷ್ಟ ಪರಿಹಾರದಲ್ಲಿ ಹೊಂದಾಣಿಕೆ ಮಾಡಲಾಗುವುದು.

ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ ಹಾಗೂ ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಬೆಳೆ ಹಾನಿಯಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದ್ದು, ಅಧಿಸೂಚಿಸಿದ ಘಟಕದಲ್ಲಿ ಶೇ.25 ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆ ನಷ್ಟವಾದಲ್ಲಿ ವಿಮೆಗೆ ಒಳಪಟ್ಟ ಬೆಳೆ ನಷ್ಟದ ವರದಿ ಮಾಡಿದ ರೈತರಿಗೆ ಮಾದರಿ ಸಮೀಕ್ಷೆಗೆ ಅನುಗುಣವಾಗಿ ಪರಿಹಾರ ನೀಡಲಾಗುವುದು.

ಕಟಾವಿನ ನಂತರದ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ ಹಾಗೂ ಕಟಾವು ಕೈಗೊಳ್ಳುವ 14 ದಿನಗಳ ಒಳಗೆ ಚಂಡಮಾರುತ, ಅಕಾಲಿಕ ಮಳೆಯಿಂದ ಬೆಳೆ ನಾಶವಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದೆ. ಮೇಲಿನ ಎರಡೂ ಸಂದರ್ಭದಲ್ಲಿ ರೈತರು ವಿಮಾ ಸಂಸ್ಥೆ / ಹಣಕಾಸು ಸಂಸ್ಥೆ ಅಥವಾ ಕೃಷಿ ಇಲಾಖಾ ಕಚೇರಿಗೆ 72 ಗಂಟೆಗಳ ಒಳಗಾಗಿ ಬೆಳೆ ಹಾನಿ ವಿವರದ ಮಾಹಿತಿ ಒದಗಿಸಬೇಕು. ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75 ರಷ್ಟು ಬಿತ್ತನೆಯಾಗದಿದ್ದಲ್ಲಿ ವಿಮೆ ಮಾಡಿಸಿದ ರೈತರಿಗೆ ವಿಮಾ ಮೊತ್ತದ ಶೇ.25 ರಷ್ಟು ಪರಿಹಾರ ದೊರೆಯಲಿದೆ.

ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆಯಲ್ಲಿ ಭಾಗವಹಿಸಲು ಇಚ್ಚಿಸದಿದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಕೊನೆಯ ದಿನಾಂಕದ ಒಂದು ವಾರದ ಮೊದಲು ಈ ಕುರಿತು ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿ ಬೆಳೆ ವಿಮೆಯಿಂದ ಕೈಬಿಡಲು ಕೋರಬೇಕು.

 ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕೃಷಿ ಇಲಾಖೆಯ ಕಛೇರಿ, ವಾಣಿಜ್ಯ ಬ್ಯಾಂಕ್ ಅಥವಾ ಸಂಬಂಧಿಸಿದ ಸೇವಾ ಸಹಕಾರ ಸಂಘಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version