Kundapra.com ಕುಂದಾಪ್ರ ಡಾಟ್ ಕಾಂ

ಉತ್ತರಾಖಂಡ ಚಾರಣ ದುರಂತದಲ್ಲಿ ಕುಂಭಾಶಿ ಮೂಲದ ಪದ್ಮನಾಭ್‌ ಭಟ್‌ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಉತ್ತರಾಖಂಡದ ಸಹಸ್ತ್ರ ತಾಲ್‌ (ಲೇಕ್‌) ಗೆ ಚಾರಣ ಹೋಗಿ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ರಾಜ್ಯದ 9 ಜನರು ಮೃತಪಟ್ಟಿದ್ದು, ಈ ಪೈಕಿ ಕುಂಭಾಶಿ ಮೂಲದ, ಬೆಂಗಳೂರು ವಾಸಿ ಪದ್ಮನಾಭ ಭಟ್‌ (50) ಅವರೂ ಇದ್ದಾರೆ.

ಕುಂಭಾಶಿಯ ಕೊರವಡಿ ರಸ್ತೆಯ ಲ್ಲಿರುವ ಶ್ರೀ ಹರಿಹರ ನಿಲಯವು ಮೃತ ಪದ್ಮನಾಭ ಭಟ್ಟರ ಹಿರಿಯರ ಮೂಲ ಮನೆ. ಪದ್ಮನಾಭ ಅವರ ಹುಟ್ಟು, ವಿದ್ಯಾ ಭ್ಯಾಸ ಬೆಂಗಳೂರಿನಲ್ಲೇ ನಡೆದಿತ್ತು. ಸಿಎ ವ್ಯಾಸಂಗ ಮಾಡಿದ ಅನಂತರ ಖಾಸಗಿ ಕಂಪೆನಿಯೊಂದಕ್ಕೆ ಸೇರಿದ್ದು ಆ ಸಂಸ್ಥೆಯ ವತಿಯಿಂದ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿನ ಸಿಪಿಎ ತೇರ್ಗಡೆಯಾದರು. ಬೆಂಗಳೂರಿಗೆ ಮರಳಿದ ಬಳಿಕ ಖಾಸಗಿ ಕಂಪೆನಿ ಸೇವೆ ಯಲ್ಲಿ ಮುಂದುವರಿಸಿದ್ದರು. ಕುಂಭಾಶಿಯಲ್ಲಿ ಅವರ ಚಿಕ್ಕಪ್ಪನ ಕುಟುಂಬದವರು ವಾಸ್ತವ್ಯ ಇದ್ದಾರೆ.

ಪದ್ಮನಾಭರಿಗೆ ಪ್ರವಾಸ, ಚಾರಣ ಇತ್ಯಾದಿ ಆಸಕ್ತಿ. ಆಗಾಗ ಸಹೋದ್ಯೋಗಿಗಳು, ಸ್ನೇಹಿತರೊಡನೆ ಪ್ರವಾಸ ಹೋಗುತ್ತಿದ್ದರು. ಮೇ 29ರಂದು 22 ಜನರ ತಂಡದೊಂದಿಗೆ ಉತ್ತರಾಖಂಡದ ಉತ್ತರ ಕಾಶಿಯ ಬೆಟ್ಟ ಪ್ರದೇಶಕ್ಕೆ ಚಾರಣ ಹೋಗಿದ್ದರು.

ಯಶಸ್ವಿಯಾಗಿ ಪ್ರವಾಸ ಮುಗಿಸಿ ಹುಲ್ಲುಗಾವಲಿನಂತಹ ಬೆಟ್ಟ ಪ್ರದೇಶದಿಂದ ಜೂ. 4ರಂದು ಮಧ್ಯಾಹ್ನ 2 ಗಂಟೆಗೆ ಎಲ್ಲರೂ 15 ಸಾವಿರ ಅಡಿ ಎತ್ತರದಿಂದ ಕೆಳಗಿಳಿಯುತ್ತಿ¤ರುವಾಗ 100 ಕಿ.ಮೀ ನಷ್ಟು ವೇಗವಾಗಿ ಬೀಸಲಾರಂಭಿಸಿದ ಶೀತ ಮಾರುತದಿಂದಾಗಿ ಅವರು ತೊಟ್ಟಿದ್ದ ಜರ್ಕಿನ್‌ಗಳು ಚಿಂದಿಯಾದವು. ಆಧಾರ ತಪ್ಪಿದ ಅವರಿಗೆ ಯಾವ ಹಿಡಿತವೂ ಸಿಗ ಲಿಲ್ಲ. ನಾಲ್ಕು ಗಂಟೆ ಬೀಸಿದ ಮಾರುತ ಪರಿಸ್ಥಿತಿಯನ್ನು ಘೋರವಾಗಿಸಿತು. ಕೆಲವರು ಹೇಗೋ ಜೀವ ಉಳಿಸಿಕೊಂಡರೆ 9 ಮಂದಿ ಶೀತ ಮಾರುತಕ್ಕೆ ಬಲಿಯಾದರು.

ಬೆಂಗಳೂರಿನ ಭಟ್ಟರ ನಿವಾಸದಲ್ಲಿ ರೋದನ ಮುಗಿಲು ಮುಟ್ಟಿದೆ. ಅವರ ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರಿಯರು, ಕುಟುಂಬದವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಉತ್ತರಾಖಂಡ ಆಡಳಿತ, ಸೇನೆ ಕಾರ್ಯಾಚರಣೆ ನಡೆಸಿದೆ. ಕರ್ನಾಟಕ ಸರಕಾರವೂ ತನ್ನ ಪ್ರವಾಸಿಗರನ್ನು ವಾಪಸು ಕರೆಸಿಕೊಳ್ಳಲು ವ್ಯವಸ್ಥೆ ಮಾಡಿದೆ.

ಈ ತಂಡದಲ್ಲಿ ಬೆಂಗಳೂರಿನ ಇಬ್ಬರು ಮಹಿಳೆಯರಿದ್ದು, ಅವರು 34 ಬಾರಿ ಈ ಬೆಟ್ಟವನ್ನು ಏರಿ ಇಳಿದಿದ್ದರಂತೆ. ಅವರೂ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಶೀತ ಮಾರುತ ಒಂದು ಗಂಟೆ ತಡವಾಗಿ ಬೀಸಿದ್ದರೂ ಎಲ್ಲರೂ ಪಾರಾಗುತ್ತಿದ್ದರು.

ಪದ್ಮನಾಭ ಭಟ್‌ ಕುಂಭಾಶಿಯ ಬಗ್ಗೆ ಮಮತೆ ಹೊಂದಿದ್ದರು. ಕುಟುಂಬ ದವರು ಪೂಜೆ ನಡೆಸುತ್ತಿದ್ದ ಕುಂಭಾಶಿಯ ಶ್ರೀ ಹರಿಹರ ದೇವಾಲಯ ಅಭಿವೃದ್ಧಿಗೂ ಸಹಕಾರ ನೀಡಿದ್ದರು. ತೆಕ್ಕಟ್ಟೆ ಬಳಿಯ ಮಾಲಾಡಿಯ ಶ್ರೀ ನಂದಿಕೇಶ್ವರ ದೈವಕ್ಕೂ ರಜತ ಮುಖವಾಡ ಇತ್ಯಾದಿ ಸಮರ್ಪಿಸಿದ್ದರು. ಮುಂದಿನ ಡಿಸೆಂಬರ್‌ನಲ್ಲಿ ಊರಿಗೆ ಬಂದು ತಮ್ಮ ತಂದೆಯ ಸ್ಮರಣಾರ್ಥ ಕಾರ್ಯಕ್ರಮ ಇತ್ಯಾದಿ ನಡೆಸುವ ಉದ್ದೇಶವಿತ್ತು.

ಪದ್ಮನಾಭ ಅವರು ಕೃಷ್ಣಮೂರ್ತಿ ಭಟ್‌-ಸತ್ಯವತಿ ದಂಪತಿಯ ಪುತ್ರ. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Exit mobile version