Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಯೋಗಬಂಧು ಸಂಜೀವಣ್ಣ ನಿಧನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ: 
ಕುಂದಾಪುರದಲ್ಲಿ ಯೋಗಬಂಧು ಸಂಜೀವಣ್ಣ ಎಂದೇ ಖ್ಯಾತರಾಗದ್ದ ಸಂಜೀವ (61) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಲತಃ ಉಡುಪಿಯ ಹೆರಂಜೆ ನಿವಾಸಿ ಪ್ರಸ್ತುತ ಕುಂದಾಪುರದವರಾದ ಸಂಜೀವ ಅವರು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ವ್ಯವಸ್ಥಾಪಕರಾಗಿದ್ದರು. ಕಳೆದ 37 ವರ್ಷಗಳಿಂದ ಬ್ರಹ್ಮಾವರ ಹಾಗೂ ಕುಂದಾಫುರದಲ್ಲಿ ಉಚಿತ ಯೋಗ ತರಬೇತಿ ನೀಡುತ್ತಿದ್ದರು.

ಮಣಿಪಾಲದಲ್ಲಿ ವೈದ್ಯಕೀಯ ದಾಖಲೆಗಳ ತಜ್ಞ ಕೋರ್ಸ್‌ ಮುಗಿಸಿ ಅಲ್ಲಿಯೇ 2 ವರ್ಷ ದುಡಿದಿದ್ದ ಅವರು ಮುಂದೆ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ವೃತ್ತಿ ಆರಂಭಿಸಿದ್ದರು. ಈ ನಡುವೆ ಮುಂಬೈಯಲ್ಲಿ ಕ್ಯಾಂಟೀನ್‌ ಒಂದರಲ್ಲಿ ಕೆಲಸಕ್ಕಿದ್ದರು. ಕೆಲಸದ ವೇಳೆ ಶುರುವಾದ ಬೆನ್ನುನೋವು ಅವರನ್ನು ಹೈರಾಣಾಗಿಸಿತು. ಧರ್ಮಸ್ಥಳದಲ್ಲಿ ಆಗ ತಾನೆ ಆರಂಭವಾಗಿದ್ದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ದಾಖಲಾಗಿ ಅಲ್ಲಿನ ಚಿಕಿತ್ಸೆಯಿಂದ ಬೆನ್ನು ನೋವು ಮಾಯವಾಗಿತ್ತು. ಅನಂತರ 3 ವರ್ಷ ಸಾಧಕರಾಗಿ ದಾಖಲಾಗಿ ಪ್ರಕೃತಿ ಚಿಕಿತ್ಸೆಯ ಪ್ರಯೋಜನ ಪಡೆದು ಆರೋಗ್ಯ ವೃದ್ಧಿಸಿಕೊಂಡರು. ಸಮಾನ ಮನಸ್ಕರನ್ನೂ ಅಲ್ಲಿಗೆ ಕರೆದೊಯ್ಯುತ್ತಿದ್ದರು.

1992ರಲ್ಲಿ ಬ್ರಹ್ಮಾವರದಲ್ಲಿ ಯೋಗ ತರಗತಿ ಆರಂಭಿಸಿದರು. ಶಾಲಾ ಮಕ್ಕಳಿಗೆ ಪ್ರತಿ ರವಿವಾರ ತರಬೇತಿ ನೀಡುತ್ತಿದ್ದರು. 1993ರಲ್ಲಿ ಯೋಗ ಬಂಧು ಸಂಸ್ಥೆ ಸ್ಥಾಪಿಸಿ ಯೋಗ ಶಿಬಿರಗಳನ್ನು ಆರಂಭಿಸಿದರು. 2016ರ ವರೆಗೆ ಬ್ರಹ್ಮಾವರದಲ್ಲಿ ತರಗತಿ ನಡೆಸಿದರು. ಕುಂದಾಪುರ ಬಾಲಭವನದಲ್ಲಿ 25 ವರ್ಷಗಳಿಂದ ಬೆಳಗ್ಗೆ 5.45ರಿಂದ 7.15ರವರೆಗೆ ಪ್ರತಿನಿತ್ಯ ಯೋಗ ತರಬೇತಿ ನೀಡುತ್ತಿದ್ದರು. ಸಾರ್ವಜನಿಕ ಸಂಘ ಸಂಸ್ಥೆಗಳ ಜತೆಗೂಡಿ ಈವರೆಗೆ ಹಲವಾರು ಶಿಬಿರಗಳನ್ನು ನಡೆಸಿದ್ದಾರೆ. ಕುಂದಾಪುರ ತಾಲೂಕಿನ ವಿವಿಧೆಡೆ ನಡೆದ ಜನಜಾಗೃತಿ ವೇದಿಕೆಯ ಮದ್ಯ ವರ್ಜನ ಶಿಬಿರಗಳಲ್ಲೂ ಉಚಿತ ಯೋಗ ತರಬೇತಿ ನೀಡಿದ್ದಾರೆ. ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ ಗೌರವಗಳು ಸಂದಿದ್ದವು.

ಸಂಜೀವಣ್ಣ ಅವರು ಮಡದಿ, ಓರ್ವ ಪುತ್ರ, ಕುಟುಂಬ ವರ್ಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

Exit mobile version