ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಜ್ರಿಯಿಂದ ನೇರಳಕಟ್ಟೆ ತಲ್ಲೂರು ಮಾರ್ಗವಾಗಿ ಕುಂದಾಪುರಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ವತಿಯಿಂದ ಗ್ರಾಮಾಂತರ ಭಾಗಗಳಿಂದ ಕುಂದಾಪುರ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಜೂ.8ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮೊದಲ ಹಂತದಲ್ಲಿ ಎಬಿವಿಪಿ ಬೇಡಿಕೆಯಂತೆ ಆಜ್ರಿಯಿಂದ ಕುಂದಾಪುರಕ್ಕೆ ಬಸ್ ಸಂಚಾರ ಆರಂಭಿಸಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಿಗಲ್ಲದೆ ಸಾರ್ವಜನಿಕರಿಗೂ ಸಹಾಯವಾದಂತಾಗಿದೆ. ಹಲವು ಭಾರಿ ಈ ಮಾರ್ಗಕ್ಕೆ ಬಸ್ ಸಂಚಾರದ ಬೇಡಿಕೆ ಇರಿಸಿದ್ದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ.
ಇನ್ನು 15 ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್ ಸಂಚಾರದ ಅವಶ್ಯಕತೆ ಇದ್ದು ಆದಷ್ಟು ಬೇಗ ಇದು ಆಗುವಂತೆ ಮಾರ್ಗದ ಅವಶ್ಯಕತೆಯ ಕುರಿತು ಈಗಾಗಲೇ ಎಬಿವಿಪಿ, ವಿದ್ಯಾರ್ಥಿಗಳ ಆಗ್ರಹದ ಧ್ವನಿಯಾಗಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದೆ ಮತ್ತು 15 ದಿನಗಳ ವೊಳಗೆ ಎಲ್ಲಾ ಮಾರ್ಗಗಳಿಗೆ ಬಸ್ ವ್ಯವಸ್ಥೆ ಆಗುವ ಭರವಸೆಯೂ ಇದೆ ಎಂದು ಎಬಿವಿಪಿ ಪದಾಧಿಕಾರಿಗಳು ತಿಳಿಸಿದ್ದಾರೆ.

