ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಮಾಧ್ಯಮ, ಸಾರ್ವಜನಿಕ ರೊಂದಿಗೆ ಅಧಿಕಾರಿಗಳ ವಿಶೇಷ ಕಾಳಜಿಯಿದ್ದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಮಳೆಗಾಲದ ಪ್ರಾಕೃತಿಕ ವಿಕೋಪ ಮುಂಜಾಗೃತಾ ಕ್ರಮಗಳ ಕುರಿತು ಇಲ್ಲಿನ ಬೈಂದೂರು ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆ ವಂಡ್ಸೆ ಹೋಬಳಿಯಲ್ಲಿ ಒಂದು ಜೀವ ಹಾನಿ ಸೇರಿದಂತೆ 55 ಮನೆಗಳು ಭಾಗಶಃ ಹಾನಿಗೀಡಾಗಿದೆ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಸುಮಾರು 30 ಪ್ರಕರಣಗಳು ಸಂಭವಿಸಿದ್ದು, ಸಂತೃಸ್ತ ಕುಟುಂಬಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರರಿಗೆ ಸೂಚನೆ ನೀಡಿದರು.

ನೆರೆಪೀಡಿತ ಪ್ರದೇಶಗಳನ್ನು ಗುರುತಿಸಿ, ಮುಂಜಾಗೃತಾ ಕ್ರಮವಾಗಿ ದೋಣಿ ಹಾಗೂ ಜಾಕೆಟ್ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತ ಮುಂದಾಗಬೇಕು. ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಗೆ ಸೂಚನೆ ನೀಡಿದರು.
ಚರಂಡಿಗಳ ಹೂಳೆತ್ತಿ:
ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ಚರಂಡಿಗಳಲ್ಲಿ ಸಮರ್ಪಕವಾಗಿ ಹೂಳೆತ್ತಲು ಕ್ರಮ – ಕೈಗೊಳ್ಳಲು ಸೂಚಿಸಿದ ಶಾಸಕರು, ಕುಡಿಯುವ ನೀರು ಯೋಜನೆ ಕಾಮಗಾರಿಯ ಪೈಪ್‌ಲೈನ್ ಕಾಮಗಾರಿಯಿಂದ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಹಿಂದೆ ನರೇಗಾ ಯೋಜನೆಯಡಿ 45 ಕಾಲುಸಂಕಗಳನ್ನು ನಿರ್ಮಿಸಲಾಗಿತ್ತು. ಆದರೆ ಇತ್ತೀಚಿಗೆ ಸರಕಾರ ಈ ಯೋಜನೆಯಿಂದ ಕಾಲು ಸಂಕ, ನಿರ್ಮಿಸದಂತೆ ನಿರ್ಬಂಧಿಸಿರುವುದರಿಂದ ಜನರಿಗೆ ತುಂಬಾ ತೊಂದರೆಯಾಗಿದ್ದು, ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ ಅವರು ಈ ಬಗ್ಗೆ ಶೀಘ್ರ ಸಂಬಂಧಿತ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು.
ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯು ರೋಗ ಕಾಣಿಸಿಕೊಂಡಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ 3 ಪ್ರಕರಣಗಳು ಪತ್ತೆಯಾಗಿದೆ ಎಂಬ ತಾಲೂಕು ವೈದ್ಯಾಧಿಕಾರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿನಿಂದ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಸೂಚಿಸಿದರು. ಕುಸಿಯುವ ಹಂತದಲ್ಲಿರುವ ಶಾಲಾ ಕಟ್ಟಡಗಳ ಬಗ್ಗೆ ವರದಿ ಸಿದ್ಧಪಡಿಸಿ, ದುಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳಲ್ಲಿ ಮಕ್ಕಳನ್ನು ಕುಳ್ಳಿರಿಸದೆ, ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೇಳಿದರು.
ಮಳೆಗಾಲದಲ್ಲಿ ಶಾಲಾ ಕಂಪೌಂಡ್‌ಗಳು ಬಿದ್ದು ಅನಾಹುತ ಸಂಭವಿಸದಂತೆ, ಶಾಲಾ ಮಾಡು ಶಿಥಿಲಗೊಂಡಿದ್ದರೇ ದುರಸ್ತಿ ಹಾಗೂ ತುರ್ತು ಕ್ರಮದ ಬಗ್ಗೆ ಮುಂಜಾಗೃತಾ ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆ, ಅಗ್ನಿಶಾಮಕ, ಜಲಜೀವನ್ ಮಿಷನ್ ಹಾಗೂ ಪೊಲೀಸ್ ಇಲಾಖೆಗಳು ಕೂಡ ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಮಳೆಗಾಲದಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಬೈಂದೂರು ತಹಸೀಲ್ದಾರ್ ಶ್ರೀಕಾಂತ ಹೆಗ್ಡೆ, ಶೋಭಾಲಕ್ಷ್ಮೀ, ಬೈಂದೂರು, ಇಒ ಭಾರತಿ ಕುಂದಾಪುರ – ತಹಸೀಲ್ದಾರ್ ಹಾಗೂ ಕುಂದಾಪುರ ಇಒ ಶಶಿಧರ್, ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ್ ಸೇರಿದಂತೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.