Kundapra.com ಕುಂದಾಪ್ರ ಡಾಟ್ ಕಾಂ

ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ: ಡಾ. ಎಂ ಮೋಹನ ಆಳ್ವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
 ಶಿಸ್ತು, ಸಮಯಪ್ರಜ್ಞೆ, ಸೃಜನಶೀಲತೆ, ಕ್ರೀಡಾಮನೋಭಾವ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಅಪಾರ ಎಂದು  ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತರಾದ  ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಡಾ. ಎಂ ಮೋಹನ ಆಳ್ವ ಹೇಳಿದರು.

ನಗರದ ಸ್ವರಾಜ್ ಮೈದಾನದ ಸ್ಕೌಟ್ಸ್ – ಗೈಡ್ಸ್ ಕನ್ನಡ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠತನದ ಮೂಡುಬಿದಿರೆ ಸಹಯೋಗದಲ್ಲಿ ನಡೆದ 2024-205 ಸಾಲಿನ ಎಸ್ಸಸ್ಸೆಲ್ಸಿ ಮತ್ತು ದ್ವಿತೀಯ  ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾನ್ವಿತ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್ ರೆಂಜರ್ಸ್‌ಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಪಠ್ಯ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳು ಶೈಕ್ಷಣಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿರುವುದು ಅಭಿನಂದನಾರ್ಹ ಎಂದರು.

ಉತ್ತಮ ಅಂಕಗಳನ್ನು ಗಳಿಸಿದ ಮಕ್ಕಳಿಗೆ ತಮ್ಮ ಪರೀಕ್ಷೆ ಫಲಿತಾಂಶಗಳ ಕುರಿತು ಅಭಿಮಾನವಿರಲಿ. ಆದರೆ ಅಹಂ ಭಾವ ಬೇಡ. ವಿಧ್ಯಾರ್ಥಿಯಾಗಿ ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ ಅವುಗಳ ಅರಿವು ಇರಲಿ ಎಂದು ತಿಳಿಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ, ಶ್ರೀ  ಪಿ ಜಿ ಆರ್ ಸಿಂಧ್ಯಾ ಮಾತನಾಡಿ, ಒಂದು ವಿಶ್ವವಿದ್ಯಾಲಯ ಮಾಡಲಾಗದ ಶೈಕ್ಷಣಿಕ ಕಾರ್ಯವನ್ನು ಮೋಹನ ಆಳ್ವರು ಮಾಡುತ್ತಿದ್ದಾರೆ ಎಂದ ಅವರು. ಶೈಕ್ಷಣಿಕ ಕಾರ್ಯದ ಜೊತೆಯಲ್ಲಿ ಅಂತರಾಷ್ಟ್ರೀಯ ಜಾಂಬೂರಿ ಆಯೋಜಿಸಿದ್ದ ಕುರಿತು ನೆನೆದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳು ಬಹಳಷ್ಟಿದ್ದಾರೆ ಆದರೆ ಸ್ಕೌಟ್ಸ್  ಗೈಡ್ಸ್ ವಿಧ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಯಾಂಕ್ ಗಳಿಸಿರುವುದು ಅಭಿನಂದನೀಯ ಎಂದರು.

ಶಿಸ್ತಿನ ಶಿಕ್ಷಣ ಪಡೆದ ವಿಧ್ಯಾರ್ಥಿಗಳು ದೇಶಕ್ಕೆ ಉತ್ತಮ ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಕೊಡುಗೆ ನೀಡಲು ಸಾಧ್ಯ ಎಂದರು.

ಈಗಾಗಲೇ ಕೆಲ ವಿಶ್ವ ವಿದ್ಯಾಲಯಗಳು ಸ್ಕೌಟ್ ಗೈಡ್ಸ್‌ಗಳಿಗೆ ಮೀಸಲಾತಿಗಳನ್ನು ಕಲ್ಪಿಸಿದ್ದು ಅದರ ಪ್ರಯೋಜನಗಳನ್ನ ಪಡೆದುಕೊಳ್ಳಲು ತಿಳಿ ಹೇಳಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಸ್. ವಿರೂಪಾಕ್ಷ ಮಾತನಾಡಿ  ಶಿಕ್ಷಣದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಿಸಿಕೊಂಡಾಗ ಸರ್ವತೋಮುಖ ಕಲಿಕೆ ಸಾಧ್ಯ ಎಂದರು. ಉತ್ತಮ ಶಿಸ್ತುಬದ್ಧ ಜೀವನ ರೂಪಿಸುವ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕರಿಸುತ್ತಿದೆ ಎಂದರು. ಆತ್ಮ ವಿಶ್ವಾಸದ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸುವಲ್ಲಿ ಈ ಶಿಕ್ಷಣ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. 

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದ ದಕ್ಷಿಣ ಕನ್ನಡ, ಕಾರವಾರ, ಉಡುಪಿ, ಶಿರಸಿ, ಕೊಡಗು ಜಿಲ್ಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್,ರೋವರ್ಸ್,ರೇಂಜರ್ಸ್ ವಿಧ್ಯಾರ್ಥಿಗಳಿಗೆ ಸನ್ಮಾನ ಕಾರ್ಯ ನಡೆಯಿತು.

ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ವಿಧ್ಯಾರ್ಥಿಗಳ ಅಭಿನಂದನಾ ಪತ್ರಗಳನ್ನು ಘೋಷಿಸಿದರು,  ಕಾರ್ಯಕ್ರಮವನ್ನು ನವೀನ್ ಚಂದ್ರ ಅಂಬೂರಿ ನಿರೂಪಿಸಿ ವಸಂತ್ ದೇವಾಡಿಗ ಸ್ವಾಗತಿಸಿದರು. 

ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್ ವಂದಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ಶ್ರೀಪತಿ ಭಟ್,  ಜಿಲ್ಲಾ ಗೈಡ್ಸ್ ಆಯುಕ್ತೆ ವಿಮಲಾ ರಂಗಯ್ಯ, ಉಡುಪಿ ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ ಪೈ, ಜಿಲ್ಲಾ ಜೊತೆ ಕಾರ್ಯದರ್ಶಿ ಜಯವಂತಿ ಸೋನ್ಸ್,  ಚಂದ್ರಶೇಖರ್ ಜಿಲ್ಲಾ ಸ್ಕೌಟ್  ತರಬೇತಿ ಆಯುಕ್ತರು, ಶಿರಸಿ ಜಿಲ್ಲೆ, ಸಾವಿತ್ರಿ ಮನೋಹರ್, ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಭಾರತಿ ನಾಯಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಜ್ಞಾನ ಮಾದರಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದ ಶಾಸ್ತ ನಾಯ್ಕ್, ಎಂ.ಎಸ್ಸಿ ಯಲ್ಲಿ ಪ್ರಥಮ ಪಡೆದ ಚಂದ್ರಾಕ್ಷ, ಪಿ.ಯು.ಸಿ ನಲ್ಲಿ ಪ್ರಥಮ ಪಡೆದ ಸಾನ್ವಿ ರಾವ್, ಎಸ್ಸೆಸ್ಸೆಲ್ಸಿನಲ್ಲಿ 5ನೇ ಪಡೆದ ಭಾರ್ಗವಿ ಮಯ್ಯ ಹಾಗೂ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ ಕುಮಾರಿ ಸನ್ನಿಧಿ ರವರುಗಳನ್ನು ಗೌರವಿಸಲಾಯಿತು.

Exit mobile version