Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಕಾಶೀ ಮಠ ಸುಧೀಂದ್ರ ತೀರ್ಥರ ಜನ್ಮ ಶತಮಾನೋತ್ಸವ ಆಚರಣೆ – ಪೂರ್ವಭಾವಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
2025-26 ಜಿ.ಎಸ್.ಬಿ ಸಮಾಜದ ಶ್ರೀ ಕಾಶೀ ಮಠದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ವರ್ಷ ಆಚರಣೆಯ ಕುರಿತು ಜಿ.ಎಸ್.ಬಿ ಸರ್ವ ದೇವಾಲಯ ಒಕ್ಕೂಟದ  ಕುಂದಾಪುರ ವಲಯದ ಪೂರ್ವಭಾವಿ ಮಾಹಿತಿ ಸಭೆ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯಿತು.

ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಸರ್ವ ದೇವಾಲಯ ಒಕ್ಕೂಟದ ಅಧ್ಯಕ್ಷ ಅತುಲ್ ಕುಡ್ವ ವಿಸ್ತೃತ ಮಾಹಿತಿ ನೀಡಿದರು. ಗುರುಗಳ ಜನ್ಮ ಶತಮಾನೋತ್ಸವ ಆಚರಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಸುಧೀಂದ್ರ ಫಲೋದ್ಯಾನ
ಸುಮಾರು 1 ಲಕ್ಷಕ್ಕೂ ಹೆಚ್ಚು ವಿವಿಧ ಬಗೆಯ ಹಣ್ಣುಗಳ ಸಸಿಯನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಊರಿನ ಸಮಾಜ ಬಾಂಧವರು ಮನೆ, ಕಛೇರಿ, ಉದ್ಯಮ ಹಾಗೂ ಇನ್ನಿತರ ಕಡೆಗಳಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಬಹುದು ಎಂದರು.

ಶ್ರೀ ಸುಧೀಂದ್ರ ಸ್ವಾಮೀಜಿ ಪಾದುಕೆ ರಥಯಾತ್ರೆ
ಗುರುವರ್ಯರ ಪಾದುಕೆಯ ರಥಯಾತ್ರೆ ಜುಲೈ 7 ರಂದು ಶ್ರೀಮದ್ ವರದೇಂದ್ರ ತೀರ್ಥ ಸ್ವಾಮೀಜಿಯವರ ಆರಾಧನಾ ಮಹೋತ್ಸವದಂದು ಹರಿದ್ವಾರದಿಂದ ಆರಂಭಗೊಳ್ಳಲಿದೆ. ದೇಶದಲ್ಲಿರುವ ಸಮಾಜದ ಎಲ್ಲ ಊರುಗಳಲ್ಲಿ ಈ ರಥಯಾತ್ರೆ ಬರಲಿದ್ದು ಎಲ್ಲರಿಗೂ ಸ್ವಾಮೀಜಿಯವರ ವೃಂದಾವನದ ಮಂತ್ರಾಕ್ಷತೆ ಹಾಗೂ ಗಂಗಾಜಲ ನೀಡಲಾಗುವುದು. ಸರ್ವರೂ ಈ ರಥಯಾತ್ರೆಯಲ್ಲಿ ಭಾಗವಹಿಸುವಂತೆ ಹೇಳಿದರು.

ಮನೆ ಮನೆ ಭಜನೆಯೊಂದಿಗೆ ವ್ಯಾಸೋಪಾಸನ
ಪ್ರತಿ ಊರಿನ ಪ್ರತಿಯೊಂದು ಮನೆಯಲ್ಲಿ ಭಜನೆ ಹಾಗೂ ವ್ಯಾಸೋಪಾಸನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಚರ್ಚಿಸಲಾಯಿತು.

ಸುಧೀಂದ್ರ ಸ್ವಾಮೀಜಿ ಜನ್ಮ ಶತಾಬ್ಧಿ ಸ್ಮಾರಕ ಕಟ್ಟಡ
ಮಂಗಳೂರಿನ ನಿಗಮಾಗಮ ಪಾಠಶಾಲೆಯ ಕಟ್ಟಡವನ್ನು ಪುನರ್ ನಿರ್ಮಾಣಗೊಳಿಸಿ ಜನ್ಮ ಶತಾಬ್ಧಿ ಕಟ್ಟಡವನ್ನು ಕಟ್ಟಲಾಗುವುದು. ಅಲ್ಲದೇ ಗುರುವರ್ಯರ ಪ್ರತಿಮೆಯನ್ನು ಸ್ಥಾಪಿಸಲಾಗುವುದು.

ಕೋಟಿ ಗಾಯತ್ರಿ ಹವನ
ಸಮಾಜದ ಸರ್ವ ವೈದಿಕ ವೃಂದದವರಿಂದ ಕೋಟಿ ಗಾಯತ್ರಿ ಹವನ ಆಯೋಜಿಸುವ ಸಲುವಾಗಿ ಮಾಹಿತಿ ನೀಡಲಾಯಿತು.

ಅಲ್ಲದೇ ಸಾಮಾಜಿಕವಾಗಿ ಸಮಾಜದ ಹಲವು ಸಂಘ ಸಂಸ್ಥೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಹಸ್ತ, ವೈದ್ಯಕೀಯ ಚಿಕಿತ್ಸೆಗಾಗಿ ನೆರವು, ಮಕ್ಕಳಿಗಾಗಿ ಭಜನೆ, ಡ್ರಾಯಿಂಗ್, ಕ್ವಿಜ್ ಮತ್ತು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚರ್ಚಿಸಲಾಯಿತು.

ಸರ್ವ ದೇವಾಲಯ ಒಕ್ಕೂಟದ ಕಾರ್ಯದರ್ಶಿ ಆರ್ಬೆಟ್ಟು ಮಾಧವ ಕಾಮತ್, ಖಜಾಂಚಿ ರಾಘವೇಂದ್ರ ಭಕ್ತ, ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ದಿನೇಶ್ ಕಾಮತ್, ಒಕ್ಕೂಟದ ಮಾಜಿ ಅಧ್ಯಕ್ಷರಾದ ಶ್ರೀಧರ್ ಕಾಮತ್ ಮತ್ತು ಭಂಡಾರಿ ರಾಧಾಕೃಷ್ಣ ಶೆಣೈ ವೇದಿಕೆಯಲ್ಲಿದ್ದರು.

ದೇವಳದ ಮೊಕ್ತೇಸರರು, ವಲಯ ದೇವಾಲಯ, ಶಾಖಾ ಮಠದ ಪ್ರತಿನಿಧಿಗಳು ಭಾಗವಹಿಸಿದ್ದರು.

Exit mobile version