ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಬಂಧಿಕರ ಮನೆಯ ಮದುವೆ ಕಾರ್ಯಕ್ರಮಕ್ಕೆ ತಿಪಟೂರಿನಿಂದ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಬುಧವಾರ ಸಂಜೆ ಬಿಜಾಡಿ ಗ್ರಾಮದಲ್ಲಿ ಸಮುದ್ರಕ್ಕಿಳಿದಿದ್ದು ಒಬ್ಬ ನಾಪತ್ತೆಯಾಗಿದ್ದಾನೆ. ತಿಪಟೂರಿನ ನಿವಾಸಿ ಯೋಗೀಶ್ (23) ಸಮುದ್ರದಲ್ಲಿ ಕೊಚ್ಚಿಹೋಗಿ ನಾಪತ್ತೆಯಾದ ವಿದ್ಯಾರ್ಥಿ. ಯೋಗೀಶನ ಸ್ನೇಹಿತ ಸಂದೀಪನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ತಿಪಟೂರಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ಯೋಗೀಶ್ ಹಾಗೂ ಸಂದೀಪ್ ಕುಂದಾಪುರದ ಸಂಬಂಧಿಕರ ಮನೆಗೆ ಮದುವೆ ಕಾರ್ಯಕ್ರಮಕ್ಕೆಂದು ಬಂದಿದ್ದರು. ಬುಧವಾರ ಸಂಜೆ ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾರಸ್ ಮನೆ ಸಮೀಪದ ಕಡಲತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದು. ನೀರಿನ ಅಲೆಗಳನ್ನು ಕಂಡ ಯುವಕರು ಸಮುದ್ರಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.
► ಎದೆ ಹಾಲು ಕುಡಿದ ಕೆಲಹೊತ್ತಿನಲ್ಲಿ ಹಸುಗೂಸು ಸಾವು- https://kundapraa.com/?p=73312 .
ನೀರಿಗಿಳಿದ ಸಂದರ್ಭ ಅಲೆಗಳ ಹೊಡೆತಕ್ಕೆ ಯೋಗೀಶ್ ಕೊಚ್ಚಿ ಹೋಗುತ್ತಿದ್ದ ಸಂದರ್ಭ ಸಂದೀಪ ಕಾಪಾಡಲು ಹೋದರು ಕೂಡ ತೀವ್ರ ತರಹದ ಅಲೆಗಳ ಆರ್ಭಟ ಇದ್ದಿದ್ದರಿಂದ ಏನೂ ಮಾಡಲು ಸಾಧ್ಯವಾಗದೇ ಬೊಬ್ಬೆ ಹಾಕಿದ್ದಾನೆ. ಯುವಕನ ಬೊಬ್ಬೆ ಕೇಳಿದ ತಕ್ಷಣ ಓಡಿ ಬಂದ ಸ್ಥಳೀಯರು ಸಂದೀಪನನ್ನು ರಕ್ಷಿಸಿದ್ದಾರೆ. ಆದರೆ ಯೋಗೀಶ ಅಷ್ಟೊತ್ತಿಗಾಗಲೇ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕುಂದಾಪುರ ಪೊಲೀಸರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಯುವಕನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.