Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಪ.ಪೂ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದರೆ:
ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್‌ನ ಸೇವೆಯ ಧ್ಯೇಯದಿಂದ ವ್ಯಕ್ತಿ ನಿರ್ಮಾಣ ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡದ ಜಿಲ್ಲೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಹೇಳಿದರು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ 2024-25ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೀವನಕ್ಕೆ ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಕಲಿಯಲು ಸಾಧ್ಯ. ಇಲ್ಲಿ ನಡೆಯುವ ಶಿಬಿರಗಳು ವಿದ್ಯಾರ್ಥಿಗಳ ಜೀವನಕ್ಕೆ ಅವಶ್ಯವಾದ ಪಾಠಗಳನ್ನು ಹೇಳಿಕೊಡುತ್ತವೆ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತ ಡಾ. ಮೋಹನ ಆಳ್ವ ಅವರ ಶ್ರಮದಿಂದ ಜಿಲ್ಲಾ ಘಟಕವು ಮುಂಚೂಣಿಯಲ್ಲಿದೆ. ಆಳ್ವಾಸ್ ಸಾಂಸ್ಕೃತಿಕ ಜಾಂಬೂರಿಯು ಇಡೀ ವಿಶ್ವವೇ ಮೂಡುಬಿದಿರೆಯತ್ತ ಮುಖ ಮಾಡುವಂತೆ ಮಾಡಿತ್ತು ಎಂದರು.   

ಪಠ್ಯದ ಕಲಿಕೆಯ ಜೊತೆಗೆ ಪಠ್ಯತರ ಚಟುವಟಿಕೆಗಳು ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಮನಸ್ಥಿತಿ ಧನಾತ್ಮನಕವಾಗಿರಲು ಸಾಧ್ಯ ಎಂದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮದ್ ಸದಾಕತ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಾರ್ಥನೆಯಿಂದಲೇ ಇದರ ಧ್ಯೇಯವನ್ನು ತಿಳಿಯಬಹುದಾಗಿದೆ. ಸೇವಾ ಮನೋಭಾವ ಎಲ್ಲಾ ವಿದ್ಯಾರ್ಥಿಗಳು ಬೆಳೆಸುವುದು ಅವಶ್ಯಕ ಎಂದರು.

ಯುವಜನತೆ ದೇಶದ ಆಸ್ತಿ. ಈ ಯುವಶಕ್ತಿಯನ್ನು ಬೆಳೆಸುವ ಕಾರ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಕೌಶಲ, ನಾಗರಿಕ ಮೌಲ್ಯಗಳು ಹಾಗೂ ದೈಹಿಕ ಸಾಮರ್ಥ್ಯ ಬೆಳೆಸುವಲ್ಲಿ ಇದರ ಪಾತ್ರ ಅನನ್ಯ ಎಂದರು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಝಾನ್ಸಿ ಪಿ. ಎನ್ ಹಾಗೂ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ. ರೋವರ್ ಸ್ಕೌಟ್ ಲೀಡರ್  ಸುನಿಲ್, ರೇಂಜರ್ ಲೀಡರ್ ವೀಣಾ, ದಳನಾಯಕ ಕಾರ್ತಿಕ್, ದಳ ನಾಯಕಿ ನಕ್ಷತ್ರ ಇದ್ದರು.

ವಿದ್ಯಾರ್ಥಿನಿ ನಕ್ಷತ್ರ ಸ್ವಾಗತಿಸಿ, ವಿದ್ಯಾರ್ಥಿನಿ ವ? ವಂದಿಸಿ, ವಿದ್ಯಾರ್ಥಿನಿ ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version