Kundapra.com ಕುಂದಾಪ್ರ ಡಾಟ್ ಕಾಂ

ಹೆರಂಜಾಲು: ಶೆಫ್‌ಟಾಕ್‌ ನ್ಯೂಟ್ರಿಫುಡ್‌ನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶೆಫ್‌ಟಾಕ್‌ ನ್ಯೂಟ್ರಿಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನೂತನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭ ಶನಿವಾರ ತಾಲೂಕಿನ ಹೇರಂಜಾಲುವಿನಲ್ಲಿ ಜರುಗಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಫ್ಯಾಕ್ಟರಿ ಕಟ್ಟೋದು ಅಷ್ಟು ಸುಲಭವಲ್ಲ. ಪುಟ್ಟ ಹಳ್ಳಿಯಿಂದ ದೆಹಲಿವರೆಗೂ ಉದ್ಯಮ ಹೊಂದಿರುವ ಗೋವಿಂದ ಪೂಜಾರಿ ಅವರ ಸಾಧನೆ ನಿಜಕ್ಕೂ ಮೆಚ್ಚುವಂತದ್ದು. ಮನುಷ್ಯ ಕಷ್ಟಪಟ್ಟು ಮುಂದೆ ಬಂದಿದ್ದರಷ್ಟೇ ಆತನಿಗೆ ಕಷ್ಟಪಟ್ಟವರ ಬೆಲೆ ಗೊತ್ತಿರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಉದ್ಯಮಗಳು ಸ್ಥಾಪನೆಯಾಗಬೇಕು. ಇಂಥ ಉದ್ಯಮಿಗಳನ್ನು ಬೆಂಬಲಿಸಬೇಕು ಎಂದು ಹೇಳಿದರು.

ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಮಾತನಾಡಿ, ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಾನು ನೋಡಿದ ದಿಟ್ಟ ಮಹಿಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ಮಾರ್ಡನ್ ಇಂದಿರಾ ಗಾಂಧಿ ಸ್ವರೂಪ ಹೊಂದಿರುವವರು ಅವರು. ಹತ್ತು ಜನ ಪುರುಷ ರಾಜಕಾರಣಿಗಳ ಶಕ್ತಿ ಅವರಿಗಿದೆ ಎಂದು ಶ್ಲಾಘಿಸಿದರು.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಯಾವುದೇ ಸರಕಾರವಿದ್ದರು ಬೇಡಿಕೆಯಷ್ಟು ಸರಕಾರಿ ಉದ್ಯಮವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬುದು ವಾಸ್ತವ ಸಂಗತಿ. ಆದರೆ ಉದ್ಯೋಗ ನೀಡುವ ಉದ್ಯಮಿಗಳಿಗೆ ಬೆಂಬಲವಾಗಿ ನಿಂತು ನಿರುದ್ಯೋಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್. ರಾಜು ಪೂಜಾರಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮ ದೇವಾಡಿಗ, ಜಿಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ, ಉದ್ಯಮಿ ವಿಜಯ್ ಶೆಟ್ಟಿ, ಸಂಜೀವ್  ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.

ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಬಿಜೂರು ಸರಕಾರಿ ಶಾಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿಯ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಶೆಫ್ ಟಾಕ್ ನ್ಯೂಟ್ರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮ್ಯಾನೆಜಿಂಗ್ ಡೈರೆಕ್ಟರ್ ಗೋವಿಂದ ಬಾಬು ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

Exit mobile version